HomeLOCALMangalore : ಮಾರ್ಚ್ 1 ರಿಂದ ಮಂಗಳೂರು-ಮಸ್ಕತ್ ನೇರ ವಿಮಾನ ಸೇವೆ ಪುನರಾರಂಭ: ಸಂಸದ ಕ್ಯಾ....

Mangalore : ಮಾರ್ಚ್ 1 ರಿಂದ ಮಂಗಳೂರು-ಮಸ್ಕತ್ ನೇರ ವಿಮಾನ ಸೇವೆ ಪುನರಾರಂಭ: ಸಂಸದ ಕ್ಯಾ. ಚೌಟ ಘೋಷಣೆ

Mangalore : ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಪ್ರಯಾಣಿಕರು ಹಾಗೂ ಅನಿವಾಸಿ ಭಾರತೀಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಮಾರ್ಚ್ 1 ರಿಂದ ಮಂಗಳೂರು ಮತ್ತು ಮಸ್ಕತ್ ನಡುವೆ ನೇರ ವಿಮಾನ ಸೇವೆ ಪುನರಾರಂಭಗೊಳ್ಳಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಮಾರ್ಗದ ವಿಮಾನಗಳನ್ನು ನಿರ್ವಹಿಸಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಕರಾವಳಿ ಭಾಗದಿಂದ ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಸಾವಿರಾರು ಜನರಿದ್ದಾರೆ. ಮಂಗಳೂರು-ಮಸ್ಕತ್ ನೇರ ಸೇವೆ ಹಠಾತ್ ಸ್ಥಗಿತಗೊಂಡ ಬಳಿಕ ಪ್ರಯಾಣಿಕರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಸಂಪರ್ಕ ವಿಮಾನ ಹಿಡಿಯಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು. ಇದರಿಂದ ಸಮಯ ಮತ್ತು ಹಣ ಎರಡೂ ಹೆಚ್ಚು ವ್ಯಯವಾಗುತ್ತಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಸಂಸದ ಚೌಟ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪದೇ ಪದೇ ಪತ್ರ ವ್ಯವಹಾರ ನಡೆಸಿ ಒತ್ತಡ ತಂದಿದ್ದರು.

ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಾರಕ್ಕೆ ಎರಡು ಬಾರಿ ಅಂದರೆ ಭಾನುವಾರ ಮತ್ತು ಮಂಗಳವಾರ ಈ ಮಾರ್ಗದಲ್ಲಿ ಹಾರಾಟ ನಡೆಸಲಿದೆ. ನೇರ ಸೇವೆ ಲಭ್ಯವಾಗುವ ಕಾರಣ ಪ್ರಯಾಣ ಸಮಯ ಗಣನೀಯವಾಗಿ ಉಳಿತಾಯವಾಗಲಿದ್ದು, ಮಂಗಳೂರು, ಉಡುಪಿ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಭಾಗದ ಎನ್‌ಆರ್‌ಐ ಕುಟುಂಬಗಳಿಗೆ ತಮ್ಮ ಊರಿಗೆ ನೇರವಾಗಿ ಮರಳಲು ಸಾಧ್ಯವಾಗಲಿದೆ.

ಈ ಮಹತ್ವದ ನಿರ್ಧಾರವನ್ನು ಶ್ಲಾಘಿಸಿದ ಕ್ಯಾ. ಬ್ರಿಜೇಶ್ ಚೌಟ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರಿಗೆ ಧನ್ಯವಾದ ಅರ್ಪಿಸಿದರು. ಮಂಗಳೂರು ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ಸಂಪರ್ಕ ಸುಧಾರಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಲಾಗುತ್ತಿದ್ದು ಇದರ ಫಲವಾಗಿ ಈ ಸೇವೆ ಮರಳಿ ಬರುತ್ತಿದೆ ಎಂದು ಅವರು ಹೇಳಿದರು.

ಮಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು, ಗಲ್ಫ್ ರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಕರಾವಳಿ ಕರ್ನಾಟಕ ಮತ್ತು ಕೇರಳದ ಜನರಿಗೆ ಇದು ಜೀವನಾಡಿಯಾಗಿದೆ. ಮಸ್ಕತ್ ಸೇವೆ ಪುನರಾರಂಭಗೊಳ್ಳುವ ಸುದ್ದಿ ತಿಳಿದ ಪ್ರಯಾಣಿಕರು ಮತ್ತು ಎನ್‌ಆರ್‌ಐ ಸಮುದಾಯ ಸಂತಸ ವ್ಯಕ್ತಪಡಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments