Bellary : ಉಪನ್ಯಾಸಕರಿಂದ ತರಾಟೆ ಆರೋಪ; ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ! ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆಕ್ರೋಶ!
ಘಟನೆಯ ವಿವರ : ಬಳ್ಳಾರಿ ನಗರದ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಡಿಪ್ಲೊಮಾ ವಿದ್ಯಾರ್ಥಿ ಅರವಿಂದ್ ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ನಗರದ ಗುಗ್ಗರಹಟ್ಟಿ ನಿವಾಸಿಯಾಗಿದ್ದರು.
ಆತ್ಮಹತ್ಯೆಗೆ ಕಾರಣವೇನು?
ವಿದ್ಯಾರ್ಥಿಗಳ ನಡುವೆ ನಡೆದ ಸಣ್ಣ ಮಟ್ಟದ ಜಗಳದ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯು ಅರವಿಂದ್ ಅವರ ಪೋಷಕರನ್ನು ಕಾಲೇಜಿಗೆ ಕರೆಸಿತ್ತು. ಈ ವೇಳೆ ಎಚ್‌ಒಡಿ (HOD) ಮತ್ತು ಪ್ರೊಫೆಸರ್‌ಗಳು ಪೋಷಕರ ಸಮ್ಮುಖದಲ್ಲೇ ಅರವಿಂದ್ ಅವರನ್ನು ತೀವ್ರವಾಗಿ ತರಾಟೆಗೈದಿದ್ದರು ಎನ್ನಲಾಗಿದೆ. “ಇಂತಹ ಗಲಾಟೆ ಮಾಡುವ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ, ಇದು ಕೊನೆಯ ಎಚ್ಚರಿಕೆ” ಎಂದು ಎಚ್ಚರಿಸಿದ್ದರು. ಇದರಿಂದ ತೀವ್ರವಾಗಿ ನೊಂದ ಅರವಿಂದ್ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಹಪಾಠಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ:
ಅರವಿಂದ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಬುಧವಾರ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಕಾಲೇಜಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ತನಿಖೆ:
ಘಟನಾ ಸ್ಥಳಕ್ಕೆ ಬ್ರೂಸ್ ಪೇಟ್ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

