Home LOCAL Neralakatte : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಡೀ ಮನೆ ಸುಟ್ಟು ಭಸ್ಮವಾಯಿತು!

Neralakatte : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಡೀ ಮನೆ ಸುಟ್ಟು ಭಸ್ಮವಾಯಿತು!

0
43
Neralakatte: Entire house burnt down due to electrical short circuit!

ಕುಂದಾಪುರ :  ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ಶನಿವಾರ ತಡರಾತ್ರಿ ಭೀಕರ ಬೆಂಕಿ ಆಕಸ್ಮಿಕ ಸಂಭವಿಸಿದೆ. ಹಂದಕುಂದ ಅರೆಕಲ್ಲು ಮನೆಯ ಗಣಪು ಶೆಡ್ತಿ ಅವರು ತಮ್ಮ ಮೊಮ್ಮಗನೊಂದಿಗೆ ಮನೆಯಲ್ಲಿದ್ದರು. ಶನಿವಾರ ರಾತ್ರಿ ಹತ್ತಿರದ ಮನೆಯೊಂದರಲ್ಲಿ ಭಜನಾ ಕಾರ್ಯಕ್ರಮವಿದ್ದ ಕಾರಣ ಇಬ್ಬರೂ ಮನೆಗೆ ಬೀಗ ಹಾಕಿ ಅಲ್ಲಿಗೆ ತೆರಳಿದ್ದರು. ಆದರೆ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ.

ರಾತ್ರಿ ಸುಮಾರು 12 ಗಂಟೆಯ ನಂತರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮನೆಯಿಂದ ಬೆಂಕಿ ಜ್ವಾಲೆ ಏಳುತ್ತಿರುವುದನ್ನು ಕಂಡು ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಮನೆಯ ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿತ್ತು. ಮನೆಯ ಹಂಚು, ಗೋಡೆಗಳು ಸೀಳಿಹೋಗಿದ್ದು, ಒಳಗಿದ್ದ ಟಿವಿ, ಬಟ್ಟೆಬರೆ, ಪಾತ್ರೆಗಳು ಮತ್ತು ಸ್ವಲ್ಪ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಸ್ಥಳೀಯರು ಮತ್ತು ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯೋಚಿತ ಕಾರ್ಯಾಚರಣೆಯಿಂದಾಗಿ ಹತ್ತಿರದಲ್ಲೇ ಇದ್ದ ದನದ ಕೊಟ್ಟಿಗೆಗೆ ಬೆಂಕಿ ಹರಡುವುದು ತಪ್ಪಿದ್ದು, ದೊಡ್ಡ ಮಟ್ಟದ ಪ್ರಾಣಾಪಾಯ ದೂರವಾಗಿದೆ. ಈ ದುರಂತದಿಂದ ಗಣಪು ಶೆಡ್ತಿ ಅವರಿಗೆ ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದ್ದು, ಕುಟುಂಬವು ಈಗ ಸಂಕಷ್ಟಕ್ಕೆ ಸಿಲುಕಿದೆ.

LEAVE A REPLY

Please enter your comment!
Please enter your name here

error: Content is protected !!