Saturday, April 11, 2026
Homeತಾಜಾ ಸುದ್ದಿAssam CM Himanta Vs Congress : ಕುಟುಂಬದ ವಿರುದ್ಧ ಆರೋಪ ಮಾಡುವ ಮೊದಲು ದಾಖಲೆಗಳನ್ನು...

Assam CM Himanta Vs Congress : ಕುಟುಂಬದ ವಿರುದ್ಧ ಆರೋಪ ಮಾಡುವ ಮೊದಲು ದಾಖಲೆಗಳನ್ನು ‘ಪರಿಶೀಲಿಸದ’ ಕಾಂಗ್ರೆಸ್‌ಗೆ ಅಸ್ಸಾಂ ಮುಖ್ಯಮಂತ್ರಿ ಟೀಕೆ

ಶಿವಸಾಗರ್/ಗುವಾಹಟಿ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮಂಗಳವಾರ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಮಾಡಲಾದ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಅಸ್ಸಾಂ ಸಿಎಂ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಹಲವಾರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಮತ್ತು ವಿದೇಶದಲ್ಲಿ ಅಘೋಷಿತ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಭಾನುವಾರ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಕಾಂಗ್ರೆಸ್ ಇಂತಹ ಆರೋಪಗಳನ್ನು ಸಾರ್ವಜನಿಕವಾಗಿ ಮಾಡುವ ಮೊದಲು ವಿದೇಶಾಂಗ ಸಚಿವರನ್ನಾದರೂ ಕೇಳಿ ಸತ್ಯಾಸತ್ಯತೆ ತಿಳಿಯಬೇಕಿತ್ತು ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಅಸ್ಸಾಂ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಪವನ್ ಖೇರಾ ಅವರು ಪ್ರಸ್ತುತ ಹೈದರಾಬಾದ್‌ಗೆ ಓಡಿಹೋಗಿರಬಹುದು, ಆದರೆ ಅಸ್ಸಾಂ ಪೊಲೀಸರು ಅವರನ್ನು ‘ಪಾತಾಳ’ದಿಂದಾದರೂ ಹುಡುಕಿ ಹೊರತೆಗೆಯುತ್ತಾರೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಅಸ್ಸಾಂ ಪೊಲೀಸ್ ತಂಡವು ದೆಹಲಿಯಲ್ಲಿರುವ ಖೇರಾ ಅವರ ನಿವಾಸಕ್ಕೆ ವಿಚಾರಣೆಗಾಗಿ ಭೇಟಿ ನೀಡಿದೆ. ಸಾರ್ವಜನಿಕವಾಗಿ ಸುಳ್ಳು ಸುದ್ದಿ ಹರಡಿ ಜನರನ್ನು ಅವಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧವೂ ಕಟು ಟೀಕೆ ಮಾಡಿರುವ ಶರ್ಮಾ, ವಯಸ್ಸಾದ ಕಾರಣ ಖರ್ಗೆ ಅವರು ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ ಅಥವಾ ಸಿಬಿಐ ಈ ಬಗ್ಗೆ ತನಿಖೆ ನಡೆಸಲಿ ಎಂಬ ಖರ್ಗೆ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೊದಲು ಜನರನ್ನು ಅವಮಾನಿಸಿ ನಂತರ ತನಿಖೆ ಕೇಳುವುದು ಸರಿಯಲ್ಲ ಎಂದಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಅವರೇ ಈ ದಾಖಲೆಗಳನ್ನು ಪವನ್ ಖೇರಾ ಅವರಿಗೆ ನೀಡಿದ್ದರೆ, ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ರಾಹುಲ್ ಅವರನ್ನೂ ಆರೋಪಿಯನ್ನಾಗಿ ಸೇರಿಸಲಾಗುವುದು ಎಂದು ಅವರು ಗುಡುಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!