Thursday, April 9, 2026
Homeತಾಜಾ ಸುದ್ದಿSensex Nifty | ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್ : ಸೆನ್ಸೆಕ್ಸ್, ನಿಫ್ಟಿ ಕುಸಿತ

Sensex Nifty | ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್ : ಸೆನ್ಸೆಕ್ಸ್, ನಿಫ್ಟಿ ಕುಸಿತ

ಮುಂಬೈ : ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಒಪ್ಪಂದವು ಆಶಾದಾಯಕವಾಗಿ ಮುಂದುವರಿಯದ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಭಾರಿ ಹೊಡೆತ ನೀಡಿದೆ. ಗುರುವಾರ ವಹಿವಾಟಿನ ಅಂತ್ಯಕ್ಕೆ ಬಾಂಬೆ ಷೇರುಪೇಟೆ ಸೂಚ್ಯಂಕ ‘ಸೆನ್ಸೆಕ್ಸ್’ 931 ಅಂಕಗಳಷ್ಟು ಕುಸಿದು 76,631.65ರಲ್ಲಿ ವಹಿವಾಟು ಮುಗಿಸಿದೆ. ಅದೇ ರೀತಿ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ‘ನಿಫ್ಟಿ’ 222.5 ಅಂಕಗಳ ಕುಸಿತದೊಂದಿಗೆ 23,775.10 ಮಟ್ಟಕ್ಕೆ ಇಳಿಕೆಯಾಗಿದೆ. ಬುಧವಾರ ಕದನ ವಿರಾಮಕ್ಕೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿದ್ದರಿಂದ ಮಾರುಕಟ್ಟೆ ಚೇತರಿಕೆ ಕಂಡಿತ್ತಾದರೂ, ಗುರುವಾರ ಉಂಟಾದ ಬೆಳವಣಿಗೆಗಳು ಹೂಡಿಕೆದಾರರ ಉತ್ಸಾಹಕ್ಕೆ ತಣ್ಣೀರೆರಚಿದೆ.

ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಗಳು ಮತ್ತು ಇದಕ್ಕೆ ಪ್ರತಿಯಾಗಿ ಇರಾನ್ ವಿಶ್ವದ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿರುವುದು ಮಾರುಕಟ್ಟೆಯ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ವಿದೇಶಿ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಿಂದ ಸುಮಾರು 21 ಸಾವಿರ ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದಾರೆ. ಇದು ಮಾರುಕಟ್ಟೆಯ ಮೇಲೆ ಹೆಚ್ಚುವರಿ ಒತ್ತಡ ಹೇರಿದ್ದು, ದಿನದ ವಹಿವಾಟಿನ ಅಂತ್ಯದ ವೇಳೆಗೆ ಸೂಚ್ಯಂಕಗಳು ಮತ್ತಷ್ಟು ಇಳಿಕೆ ಕಾಣುವಂತಾಯಿತು.

ಷೇರುಗಳ ಪ್ರದರ್ಶನವನ್ನು ಗಮನಿಸಿದರೆ, ಇಂಟರ್ ಗ್ಲೋಬ್ ಏವಿಯೇಷನ್, ಲಾರ್ಸೆನ್ ಆಯಂಡ್ ಟೂಬ್ರೊ (L&T), ಎಟರ್ನಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳ ಷೇರುಗಳು ಭಾರಿ ನಷ್ಟ ಅನುಭವಿಸಿವೆ. ಇನ್ನು ಶ್ರೀರಾಮ್ ಫೈನಾನ್ಸ್‌ನ ಶೇ 20ರಷ್ಟು ಷೇರುಗಳನ್ನು ಎಂಯುಎಫ್‌ಜಿ (MUFG) ಖರೀದಿ ಮಾಡಿದೆ. ಇಷ್ಟೆಲ್ಲಾ ಕುಸಿತದ ನಡುವೆಯೂ ಭಾರತ ಎಲೆಕ್ಟ್ರಾನಿಕ್ಸ್ (BEL), ಪವರ್ ಗ್ರಿಡ್, ಎನ್‌ಎಚ್‌ಪಿಸಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಷೇರುಗಳು ಲಾಭ ಗಳಿಸುವಲ್ಲಿ ಯಶಸ್ವಿಯಾಗಿವೆ. ತೈಲ ಬೆಲೆ ಏರಿಕೆ ಮತ್ತು ಯುದ್ಧದ ಭೀತಿಯು ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಮುಂದುವರಿಸುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!