ಮಂಗಳೂರು :ಅರಿಫ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!; ಫೆಬ್ರವರಿ 13ಕ್ಕೇ ನಡೆದಿತ್ತು ಮೊದಲ ಸ್ಕೆಚ್!; ವಿಫಲ ಯತ್ನದ ಬೆನ್ನಲ್ಲೇ ಮತ್ತೆ ಅಟ್ಯಾಕ್ ಮಾಡಿದ್ದು ಹೇಗೆ?
ಮಂಗಳೂರಿನ ಕಿನ್ಯಾ ಅಜ್ಜಿನಡ್ಕ ನಿವಾಸಿ, ರೌಡಿಶೀಟರ್ ಅರಿಫ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಮಾರ್ಚ್ 27 ರಂದು ಅರಿಫ್‌ನನ್ನು ಬಲಿಪಡೆದ ಈ ಗ್ಯಾಂಗ್, ಇದಕ್ಕೂ ಮೊದಲು ಫೆಬ್ರವರಿ 13 ರಂದೇ ಅವನನ್ನು ಹತ್ಯೆ ಮಾಡಲು ಮೊದಲ ಪ್ರಯತ್ನ ನಡೆಸಿತ್ತು ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ಪೊಲೀಸ್ ತನಿಖೆಯ ಪ್ರಮುಖ ಅಂಶಗಳು:
- ಫೆಬ್ರವರಿ 13ರ ವಿಫಲ ಯತ್ನ: ಫೆಬ್ರವರಿ 13ರ ಮುಂಜಾನೆ ಅರಿಫ್‌ನನ್ನು ಹಿಂಬಾಲಿಸಿದ್ದ ಹಂತಕರ ತಂಡ, ಅವನನ್ನು ಕೊಲ್ಲಲು ಪ್ಲಾನ್ ಮಾಡಿತ್ತು. ಆದರೆ, ಹಿಂಬಾಲಿಸುವ ವೇಳೆ ಅನಿರೀಕ್ಷಿತ ಬೆಳವಣಿಗೆಗಳು ನಡೆದ ಕಾರಣ ಅಂದು ಸ್ಕೆಚ್ ವರ್ಕ್‌ಔಟ್ ಆಗಿರಲಿಲ್ಲ.
- ಮಾರ್ಚ್ 27ರ ಭೀಕರ ಹತ್ಯೆ: ಮೊದಲ ಪ್ರಯತ್ನ ವಿಫಲವಾದರೂ ಎದೆಗುಂದದ ಗ್ಯಾಂಗ್, ಮಾರ್ಚ್ 27 ರಂದು ಅರಿಫ್ ಮೀನು ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದೆ. ತೊಕ್ಕೊಟ್ಟು ಫ್ಲೈಓವರ್ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದ ಅರಿಫ್‌ನನ್ನು ಅಡ್ಡಗಟ್ಟಿದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
- ಇನ್ನೂ ಹಲವರ ಭಾಗಿಯ ಶಂಕೆ: ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳಲ್ಲದೆ, ಮೊದಲ ವಿಫಲ ಯತ್ನದ ಸಮಯದಲ್ಲಿ ಇನ್ನೂ ಹಲವರು ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದು, ಪಿತೂರಿಯಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿ ರಿಫಾತ್, ಜುತ್ತು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಜ್ವಾನ್ ಮತ್ತು ಇರ್ಶಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಸಂಚಿನಲ್ಲಿ ಭಾಗಿಯಾದವರು ಮತ್ತು ಎರಡನೇ ದಾಳಿಗೆ ಸಾಥ್ ನೀಡಿದವರ ನಡುವಿನ ಲಿಂಕ್ ಬಗ್ಗೆ ಪೊಲೀಸರು ಈಗ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದನ್ನು ಓದಿ : KODAGU :ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಮೃತ್ಯು…!!

