ನವದೆಹಲಿ :ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ 107 ವರ್ಷ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ; “ಭಾರತೀಯರ ಅಚಲ ಮನೋಭಾವಕ್ಕೆ ಈ ಬಲಿದಾನ ಸಾಕ್ಷಿ”
ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. 1919ರಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ಪ್ರಾಣತ್ಯಾಗ ಮಾಡಿದವರ ಬಲಿದಾನವು ಭಾರತೀಯರ ಅಚಲ ಮನೋಭಾವ ಮತ್ತು ಸ್ವಾತಂತ್ರ್ಯದ ಹಂಬಲವನ್ನು ಸದಾ ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಸಂದೇಶ: ಈ ಕುರಿತು ‘X’ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, “ಜಲಿಯನ್‌ವಾಲಾ ಬಾಗ್‌ನ ಧೀರ ಹುತಾತ್ಮರಿಗೆ ನಾವು ಹೃತೂರ್ವಕ ಗೌರವ ಸಲ್ಲಿಸುತ್ತೇವೆ. ವಿದೇಶಿ ಆಳ್ವಿಕೆಯ ಅನಾಗರಿಕತೆಯ ವಿರುದ್ಧ ಅವರು ತೋರಿದ ಧೈರ್ಯ, ಆತ್ಮಗೌರವ ಮತ್ತು ದೃಢಸಂಕಲ್ಪವು ಪ್ರತಿ ಪೀಳಿಗೆಗೂ ಪ್ರೇರಣೆಯಾಗಿದೆ. ಸ್ವಾತಂತ್ರ್ಯ, ನ್ಯಾಯ ಮತ್ತು ಘನತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಅವರ ಬಲಿದಾನವು ಶಕ್ತಿಯನ್ನು ನೀಡುತ್ತದೆ” ಎಂದು ಬಣ್ಣಿಸಿದ್ದಾರೆ.
ಇತಿಹಾಸದ ಕರಾಳ ದಿನ: 1919ರ ಏಪ್ರಿಲ್ 13ರಂದು ಪಂಜಾಬ್‌ನ ಅಮೃತಸರದಲ್ಲಿ ಬ್ರಿಟಿಷರ ದಮನಕಾರಿ ‘ರೌಲತ್ ಕಾಯ್ದೆ’ಯನ್ನು ಪ್ರತಿಭಟಿಸಲು ಶಾಂತಿಯುತವಾಗಿ ಜಮಾಯಿಸಿದ್ದ ನೂರಾರು ಅಮಾಯಕರ ಮೇಲೆ ಬ್ರಿಟಿಷ್ ಸೇನೆ ಯಾವುದೇ ಪ್ರಚೋದನೆಯಿಲ್ಲದೆ ಗುಂಡಿನ ಮಳೆಗರೆದಿತ್ತು. ಬ್ರಿಟಿಷ್ ದಾಖಲೆಗಳ ಪ್ರಕಾರ 379 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದರೂ, ವಾಸ್ತವದಲ್ಲಿ ನೂರಾರು ಜನರು ಈ ಹತ್ಯಾಕಾಂಡದಲ್ಲಿ ಬಲಿಯಾಗಿದ್ದರು. ಈ ಘಟನೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ತಿರುವು ನೀಡಿತ್ತು.

