Monday, April 13, 2026
HomeLOCALMangaluru : ಪಾರ್ಕಿಂಗ್ ಇಲ್ಲದೆ ಮಂಗಳೂರು ಸಭಾಂಗಣಗಳ ಮೇಲೆ ಪ್ರಕರಣ ದಾಖಲು

Mangaluru : ಪಾರ್ಕಿಂಗ್ ಇಲ್ಲದೆ ಮಂಗಳೂರು ಸಭಾಂಗಣಗಳ ಮೇಲೆ ಪ್ರಕರಣ ದಾಖಲು

ಮಂಗಳೂರು: ನಗರದ ಹೊರವಲಯದ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ಮದುವೆ ಸಮಾರಂಭದ ವೇಳೆ ಸಂಭವಿಸಿದ ಟ್ರಾಫಿಕ್ ಜಾಮ್ ಪ್ರಕರಣವನ್ನು ಮಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ ಮಾಡದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ‘ರಾಯಲ್ ಪ್ಯಾಲೇಸ್’ ಮತ್ತು ‘ವೊಂಡೆಲಾ ಹಾಲ್’ ಮಾಲೀಕರು ಹಾಗೂ ಆಯೋಜಕರ ವಿರುದ್ಧ ಬಜಪೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

 ಭಾನುವಾರ ಮಧ್ಯಾಹ್ನ 12 ರಿಂದ 2 ಗಂಟೆಯ ಸುಮಾರಿಗೆ ಇಲ್ಲಿನ ಎರಡು ಸಭಾಂಗಣಗಳಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಸಾವಿರಾರು ಜನ ಆಗಮಿಸಿದ್ದರು. ಆದರೆ, ಸಭಾಂಗಣದ ಒಳಗೆ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡದ ಕಾರಣ, ಅತಿಥಿಗಳು ತಮ್ಮ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿದ್ದರು. ಇದರಿಂದಾಗಿ ಮಂಗಳೂರು-ಮೂಡಬಿದ್ರಿ ರಸ್ತೆಯಲ್ಲಿ ನೂರಾರು ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಪೊಲೀಸ್ ಕಮಿಷನರ್ ಕಡಕ್ ವಾರ್ನಿಂಗ್: ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುವ ಮುನ್ನ ಸಂಚಾರ ನಿರ್ವಹಣೆ ಮತ್ತು ಪಾರ್ಕಿಂಗ್ ಬಗ್ಗೆ ಪಕ್ಕಾ ಪ್ಲಾನ್ ಇರಬೇಕು. ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಗೆ ಅಡ್ಡಿಪಡಿಸುವ ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ,” ಎಂದು ಎಚ್ಚರಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯರ ಆಕ್ರೋಶ: ಸಭಾಂಗಣಗಳ ಸುತ್ತಮುತ್ತಲ ರಸ್ತೆ ಸಾಮರ್ಥ್ಯವನ್ನು ಗಮನಿಸದೆ ಪರವಾನಗಿ ನೀಡುತ್ತಿರುವುದು ಇಂತಹ ಅವಾಂತರಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಗಂಜಿಮಠದ ನಿವಾಸಿಗಳು ಕೂಡ ಇಂತಹ ಸಭಾಂಗಣಗಳ ಮೇಲೆ ನಿರಂತರ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸುವಂತೆ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!