ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸರು ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಭಾಷಣ (Hate Speech) ಮಾಡಿದ ಮತ್ತು ಅದನ್ನು ಹರಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಅವರನ್ನು ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿಗೆ ಕರೆತರಲಾಗುತ್ತಿದೆ.
ಪ್ರಕರಣದ ಹಿನ್ನೆಲೆ: ಪುನೀತ್ ಕೆರೆಹಳ್ಳಿ ಅವರು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿದ್ದ ನೋಟಿಸ್‌ಗಳನ್ನು ಪದೇ ಪದೇ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. 2025 ರ ಆಗಸ್ಟ್ 7 ರಂದು ಬೆಳ್ತಂಗಡಿ ತಾಲೂಕಿನ ಕಸ್ಬಾ ಗ್ರಾಮದ ಹುಣಸೆಕಟ್ಟೆ ನಿವಾಸಿ ಜೋರಾಮ್ ಬಾರ್ಬೋಜಾ ಅವರು ನೀಡಿದ ದೂರಿನ ಆಧಾರದ ಮೇಲೆ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪುನೀತ್ ಕೆರೆಹಳ್ಳಿ ಅವರು ಕೋಮು ಸೌಹಾರ್ದತೆಯನ್ನು ಕೆಡಿಸುವ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಮತ್ತು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಕೋರ್ಟ್ ವಾರೆಂಟ್ ಆಧರಿಸಿ ಬಂಧನ: ಪ್ರಕರಣ ದಾಖಲಾದ ನಂತರ ಬೆಳ್ತಂಗಡಿ ಪೊಲೀಸರು ಪುನೀತ್ ಕೆರೆಹಳ್ಳಿಗೆ ಹಲವು ಬಾರಿ ನೋಟಿಸ್ ನೀಡಿದ್ದರು. ಆದರೆ, ಅವರು ವಿಚಾರಣೆಗೆ ಹಾಜರಾಗದ ಕಾರಣ ಪೊಲೀಸರು ಬೆಳ್ತಂಗಡಿ ನ್ಯಾಯಾಲಯದಿಂದ ಬಂಧನ ವಾರೆಂಟ್ (Arrest Warrant) ಪಡೆದಿದ್ದರು. ಈ ವಾರೆಂಟ್ ಜಾರಿಗೊಳಿಸಲು ಬೆಳ್ತಂಗಡಿ ಪೊಲೀಸರ ವಿಶೇಷ ತಂಡ ಬೆಂಗಳೂರಿಗೆ ತೆರಳಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದೆ. ಪ್ರಾಥಮಿಕ ವಿಚಾರಣೆಯ ನಂತರ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

