Home ಹಣಕಾಸು IMF data : ರೂಪಾಯಿ ಮೌಲ್ಯ ಕುಸಿತದಿಂದ ಭಾರತ 6ನೇ ಅತಿದೊಡ್ಡ ಆರ್ಥಿಕತೆ

    IMF data : ರೂಪಾಯಿ ಮೌಲ್ಯ ಕುಸಿತದಿಂದ ಭಾರತ 6ನೇ ಅತಿದೊಡ್ಡ ಆರ್ಥಿಕತೆ

    0
    69

    ನವದೆಹಲಿ (ಎ.17) : ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಒಂದು ಸ್ಥಾನ ಕೆಳಕ್ಕೆ ಕುಸಿದಿದೆ. 2024ರಲ್ಲಿ ಐದನೇ ಸ್ಥಾನದಲ್ಲಿದ್ದ ಭಾರತ, 2025ರ ಅವಧಿಯಲ್ಲಿ ಆರನೇ ಸ್ಥಾನಕ್ಕೆ ಜಾರಿದೆ. ಬ್ರಿಟನ್ (UK) ಈಗ ಭಾರತವನ್ನು ಹಿಂದಿಕ್ಕಿ ಮತ್ತೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.


    ಭಾರತದ ಈ ಆರ್ಥಿಕ ಕುಸಿತಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯದ ದುರ್ಬಲತೆ ಮತ್ತು ಜಿಡಿಪಿಯ (GDP) ಮೂಲ ವರ್ಷದ ಬದಲಾವಣೆಯೇ ಮುಖ್ಯ ಕಾರಣಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ. ಐಎಂಎಫ್ ಅಂಕಿಅಂಶಗಳ ಪ್ರಕಾರ, 2024ರಲ್ಲಿ ಭಾರತದ ಜಿಡಿಪಿ 3.76 ಟ್ರಿಲಿಯನ್ ಡಾಲರ್ ಆಗಿತ್ತು. ಆದರೆ 2025ರಲ್ಲಿ ಭಾರತದ ಜಿಡಿಪಿ 3.92 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾದರೂ ಸಹ, ಬ್ರಿಟನ್ 4 ಟ್ರಿಲಿಯನ್ ಡಾಲರ್ ತಲುಪುವ ಮೂಲಕ ಭಾರತವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

    ಭಾರತವು ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಮುಂದುವರಿದಿದ್ದರೂ, ಡಾಲರ್ ಎದುರು ರೂಪಾಯಿ ಮೌಲ್ಯವು ಗಣನೀಯವಾಗಿ ಕುಸಿಯುತ್ತಿರುವುದು ಹಿನ್ನಡೆಗೆ ಕಾರಣವಾಗಿದೆ. 2024ರಲ್ಲಿ ಒಂದು ಡಾಲರ್ ಬೆಲೆ 84.57 ರೂ. ಇತ್ತು, ಕಳೆದ ವರ್ಷ ಅದು 88.48 ರೂ. ಗೆ ಕುಸಿದಿತ್ತು. ಈ ವರ್ಷ ಅದು 92.59 ರೂ. ಗೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಎಫ್ ಅಂದಾಜಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಬ್ರಿಟಿಷ್ ಪೌಂಡ್ ಮೌಲ್ಯವು ಡಾಲರ್ ಎದುರು ಏರಿಕೆ ಕಂಡಿರುವುದು ಬ್ರಿಟನ್‌ಗೆ ವರದಾನವಾಗಿದೆ.

    2025-26ರ ವೇಳೆಗೆ ಜಪಾನ್ ಅನ್ನು ಹಿಂದಿಕ್ಕಿ ಭಾರತವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಗುರಿ ತಲುಪಲು ಭಾರತವು ಇನ್ನೂ ಸ್ವಲ್ಪ ಕಾಲ ಕಾಯಬೇಕಿದೆ. ಐಎಂಎಫ್ ಮುನ್ಸೂಚನೆಯ ಪ್ರಕಾರ, ಮುಂದಿನ ವರ್ಷ ಭಾರತವು ಬ್ರಿಟನ್ ಮತ್ತು ಜಪಾನ್ ಎರಡನ್ನೂ ಹಿಂದಿಕ್ಕುವ ಆಶಾವಾದವಿದ್ದರೂ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ತಲುಪಲು 2031ರ ವರೆಗೆ ಕಾಯಬೇಕಾಗಬಹುದು.

     

    LEAVE A REPLY

    Please enter your comment!
    Please enter your name here

    error: Content is protected !!