ಬೈರೂತ್ (ಎ.17): ಇಸ್ರೇಲ್ ಮತ್ತು ಲೆಬನಾನ್ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಭೀಕರ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಘೋಷಿಸಲಾದ 10 ದಿನಗಳ ಕದನ ವಿರಾಮವು ಶುಕ್ರವಾರದಿಂದ ಜಾರಿಗೆ ಬಂದಿದ್ದು, ಲೆಬನಾನ್ ರಾಜಧಾನಿ ಬೈರೂತ್ ಸೇರಿದಂತೆ ದೇಶಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ. ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಸಂಘಟನೆಯೂ ಈ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ ಎಂದು ಟ್ರಂಪ್ ಖಚಿತಪಡಿಸಿದ್ದಾರೆ.
ಕದನ ವಿರಾಮ ಜಾರಿಗೆ ಬರುತ್ತಿದ್ದಂತೆಯೇ ಬೈರೂತ್ ನಗರದಲ್ಲಿ ಸಂಭ್ರಮದ ಗುಂಡಿನ ಸದ್ದು ಕೇಳಿಬಂತು. ಸಂಘರ್ಷದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಸಾವಿರಾರು ಕುಟುಂಬಗಳು ಈಗ ದಕ್ಷಿಣ ಲೆಬನಾನ್ ಮತ್ತು ಬೈರೂತ್‌ನ ಉಪನಗರಗಳಲ್ಲಿರುವ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿವೆ. ಈ ಕದನ ವಿರಾಮವು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಜನರು ಮಾತ್ರ ಭರವಸೆಯೊಂದಿಗೆ ಮನೆಗಳತ್ತ ಸಾಗುತ್ತಿದ್ದಾರೆ.
ಕದನ ವಿರಾಮದ ಘೋಷಣೆ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಟ್ರಂಪ್, “ಹೆಜ್ಬೊಲ್ಲಾ ಈ ಅವಧಿಯಲ್ಲಿ ಸಂಯಮದಿಂದ ವರ್ತಿಸುತ್ತದೆ ಎಂದು ನಾನು ನಂಬಿದ್ದೇನೆ. ಇದು ಅವರಿಗೆ ಸಿಕ್ಕಿರುವ ದೊಡ್ಡ ಅವಕಾಶ. ಇನ್ನು ಮುಂದೆ ಯಾವುದೇ ಸಾವುಗಳು ಸಂಭವಿಸಬಾರದು; ಶಾಂತಿ ನೆಲೆಸಲಿ” ಎಂದು ತಿಳಿಸಿದ್ದಾರೆ. ಈ ನಡುವೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತನಾಡಿ, “ಶಾಂತಿ ಪ್ರಯತ್ನಗಳಿಗಾಗಿ ನಾವು ಕದನ ವಿರಾಮಕ್ಕೆ ಒಪ್ಪಿದ್ದೇವೆ, ಆದರೆ ನಮ್ಮ ಸೈನಿಕರು ಲೆಬನಾನ್ ಒಳಗಿರುವ ‘ಸುರಕ್ಷಾ ವಲಯ’ದಿಂದ ಸದ್ಯಕ್ಕೆ ಹೊರಬರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ನ ಕೆಲವು ಗ್ರಾಮಗಳ ಮೇಲೆ ಶೆಲ್ ದಾಳಿ ನಡೆಸುವ ಮೂಲಕ ನಿಯಮ ಉಲ್ಲಂಘಿಸಿದೆ ಎಂದು ಲೆಬನಾನ್ ಸೇನೆ ಆರೋಪಿಸಿದೆ. ಈ ಬಗ್ಗೆ ಇಸ್ರೇಲ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅತ್ತ ಹೆಜ್ಬೊಲ್ಲಾ ಸಂಘಟನೆಯು ಕದನ ವಿರಾಮ ಜಾರಿಗೆ ಬರುವ ಕೇವಲ 10 ನಿಮಿಷಗಳ ಮೊದಲು ಇಸ್ರೇಲ್ ಮೇಲೆ ಕೊನೆಯ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಈ ಕದನ ವಿರಾಮವನ್ನು ಇರಾನ್, ಕತಾರ್, ಜೋರ್ಡಾನ್ ಮತ್ತು ಬಹ್ರೇನ್ ದೇಶಗಳು ಸ್ವಾಗತಿಸಿವೆ.

