Home LOCAL Mangaluru | ದೇರಳಕಟ್ಟೆ: ಡಯಾಲಿಸಿಸ್ ರೋಗಿಯಿದ್ದ ಆಟೋ ತಡೆದು ಪೊಲೀಸರಿಂದ ಕಿರುಕುಳ!

Mangaluru | ದೇರಳಕಟ್ಟೆ: ಡಯಾಲಿಸಿಸ್ ರೋಗಿಯಿದ್ದ ಆಟೋ ತಡೆದು ಪೊಲೀಸರಿಂದ ಕಿರುಕುಳ!

0
111
Mangaluru | Deralakatte : Police stop auto carrying dialysis patient and harass him!

ಮಂಗಳೂರು (ಏ.17): ಗಡಿಭಾಗದ ಜನತೆ ಚಿಕಿತ್ಸೆಗಾಗಿ ಮಂಗಳೂರಿನ  ಆಸ್ಪತ್ರೆಗಳನ್ನು ಅವಲಂಬಿಸಿರುವ ಹೊತ್ತಲ್ಲೇ, ದೇರಳಕಟ್ಟೆಯಲ್ಲಿ ಪೊಲೀಸರು ತೋರಿರುವ ಉದ್ಧಟತನವು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಡಯಾಲಿಸಿಸ್‌ಗಾಗಿ ಕೇರಳದಿಂದ ರೋಗಿಗಳನ್ನು ಕರೆತರುತ್ತಿದ್ದ ‘KL-14’ ನೋಂದಣಿಯ ಖಾಸಗಿ ಆಟೋವೊಂದನ್ನು ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಕೇರಳದ ವಾಹನಗಳು ಕರ್ನಾಟಕಕ್ಕೆ ಬರಲು ಅನುಮತಿಯಿಲ್ಲ ಎಂಬಂತೆ ವರ್ತಿಸಿರುವ ಪೊಲೀಸರು, ರೋಗಿ ಮತ್ತು ಚಾಲಕನಿಗೆ ತೀವ್ರ ಕಿರುಕುಳ ನೀಡಿದ್ದಾರೆ.


ಘಟನೆಯ ವೇಳೆ ಬಾಲಕೃಷ್ಣ ಎಂಬ ಟ್ರಾಫಿಕ್ ಎಎಸ್‌ಐ ಅವರು ರೋಗಿಯ ಮೆಡಿಕಲ್ ರಿಪೋರ್ಟ್ ಮತ್ತು ಫೈಲ್‌ಗಳನ್ನು ದೊಡ್ಡ ವೈದ್ಯರಂತೆ ಪರಿಶೀಲಿಸುತ್ತಿರುವ ದೃಶ್ಯ ಕಂಡುಬಂದಿದೆ. ವಾಸ್ತವವಾಗಿ ಪೊಲೀಸರಿಗೆ ಮೆಡಿಕಲ್ ರಿಪೋರ್ಟ್ ಪರಿಶೀಲಿಸುವ ಅಥವಾ ರೋಗಿಯ ಆರೋಗ್ಯದ ಸ್ಥಿತಿಯನ್ನು ಅಳೆಯುವ ಯಾವುದೇ ಅಧಿಕಾರವಿಲ್ಲ. ಆಟೋ ಚಾಲಕ ಇದು ಬಾಡಿಗೆ ವಾಹನವಲ್ಲ, ಸ್ವಂತ ಬಳಕೆಯ ಖಾಸಗಿ ಆಟೋ ಎಂದು ಎಷ್ಟು ಹೇಳಿದರೂ ಕೇಳದ ಎಎಸ್‌ಐ, ಐದು ಸಾವಿರ ರೂಪಾಯಿ ದಂಡ ಕಟ್ಟು ಎಂದು ಹಠ ಹಿಡಿದಿರುವುದು ಇವರ ಮನುಷ್ಯತ್ವವನ್ನು ಪ್ರಶ್ನಿಸುವಂತಿದೆ.

ನಮ್ಮದು ಗಡಿನಾಡಾಗಿದ್ದು, ಮಂಜೇಶ್ವರದ ಜನರಿಗೆ ಉಳ್ಳಾಲ ಪರವೂರಲ್ಲ ಮತ್ತು ಉಳ್ಳಾಲದವರಿಗೆ ಮಂಜೇಶ್ವರ ಹೊಸತಲ್ಲ. ರಾಜ್ಯಗಳ ಗಡಿ ಎಂಬುದು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಇರುವುದೇ ಹೊರತು ಮನುಷ್ಯರನ್ನು ಬೇರ್ಪಡಿಸಲಿಕ್ಕಲ್ಲ. ಈಗಾಗಲೇ ಕೋವಿಡ್ ಸಮಯದಲ್ಲಿ ಗಡಿ ಮುಚ್ಚಿದ್ದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ನೂರಾರು ಕೇರಳಿಗರು ಪ್ರಾಣ ಕಳೆದುಕೊಂಡ ಕಹಿ ಘಟನೆಗಳು ಜಿಲ್ಲೆಯ ಹೆಸರಿಗೆ ಮಸಿ ಬಳಿದಿವೆ. ಇಂತಹ ಹೊತ್ತಿನಲ್ಲಿ ಪೊಲೀಸರು ಮಾನವೀಯತೆ ಮರೆತು ವರ್ತಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.

ಮಾನ್ಯ ಜಿಲ್ಲಾ ಪೊಲೀಸ್ ಆಯುಕ್ತರು ಈ ಕೂಡಲೇ ಮಧ್ಯಪ್ರವೇಶಿಸಿ, ರೋಗಿಗಳಿಗೆ ಮತ್ತು ಜನರಿಗೆ ಈ ರೀತಿ ಚಿತ್ರಹಿಂಸೆ ನೀಡುವ ಪೊಲೀಸರನ್ನು ಇಂತಹ ಸೂಕ್ಷ್ಮ ಪ್ರದೇಶಗಳಿಂದ ಎತ್ತಂಗಡಿ ಮಾಡಬೇಕಿದೆ. ರೋಗಿಗಳೊಂದಿಗೆ ಮತ್ತು ತುರ್ತು ಪರಿಸ್ಥಿತಿಯಲ್ಲಿರುವವರೊಂದಿಗೆ ಹೇಗೆ ಸಂಯಮದಿಂದ ವರ್ತಿಸಬೇಕು ಎಂಬ ಮಾನವೀಯತೆಯ ಪಾಠವನ್ನು ಇಂತಹ ಸಿಬ್ಬಂದಿಗಳಿಗೆ ಕಲಿಸಿದ ಬಳಿಕವೇ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

 

LEAVE A REPLY

Please enter your comment!
Please enter your name here

error: Content is protected !!