Friday, April 17, 2026
Homeತಾಜಾ ಸುದ್ದಿUttar Pradesh : ಪದೇ ಪದೇ ರಸಗುಲ್ಲ ಕೇಳಿದ್ದೇ ತಪ್ಪಾಯ್ತು, ಕೋಪದಲ್ಲಿ ರಾಕ್ಷಸನಾದ ಅಡುಗೆ ಕಾರ್ಮಿಕ

Uttar Pradesh : ಪದೇ ಪದೇ ರಸಗುಲ್ಲ ಕೇಳಿದ್ದೇ ತಪ್ಪಾಯ್ತು, ಕೋಪದಲ್ಲಿ ರಾಕ್ಷಸನಾದ ಅಡುಗೆ ಕಾರ್ಮಿಕ

ಬಸ್ತಿ, ಉತ್ತರ ಪ್ರದೇಶ (ಏ.17): ಉತ್ತರ ಪ್ರದೇಶದಲ್ಲಿ ಮದುವೆ ಮನೆಯ ಸಂಭ್ರಮದ ನಡುವೆ ಅತ್ಯಂತ ಆಘಾತಕಾರಿ ಘಟನೆ ನಡೆದಿದೆ. ಕೇವಲ ಒಂದು ರಸಗುಲ್ಲಕ್ಕಾಗಿ ಹಠ ಮಾಡಿದ ಮುಗ್ಧ ಬಾಲಕನ ಮೇಲೆ ಅಡುಗೆ ಕೆಲಸಗಾರನೊಬ್ಬ ರಾಕ್ಷಸನಂತೆ ವರ್ತಿಸಿದ್ದು, ಬಾಲಕ ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಘಟನೆಯು ಬಸ್ತಿ ಜಿಲ್ಲೆಯ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲೋಲಿ ಗೋಸಾಯಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮದುವೆ ಸಮಾರಂಭವೊಂದಕ್ಕೆ ದುರ್ಜನ್ಪುರ ನಿವಾಸಿ ಸಂತೋಷ್ ಅವರ 11 ವರ್ಷದ ಮಗ ಚಮನ್ ತನ್ನ ಅಜ್ಜಿಯ ಜೊತೆ ಬಂದಿದ್ದನು. ತಾಯಿ ತೀರಿಕೊಂಡ ನಂತರ ಚಮನ್ ಬಘನಾಲದಲ್ಲಿರುವ ಅಜ್ಜ-ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದನು.

ಮದುವೆ ಮನೆಯಲ್ಲಿ ಆಟವಾಡುತ್ತಿದ್ದ ಚಮನ್, ಅಡುಗೆ ಮನೆಗೆ ಹೋಗಿ ರಸಗುಲ್ಲ ತಿಂದಿದ್ದಾನೆ. ಆದರೆ ಒಂದಕ್ಕೆ ತೃಪ್ತನಾಗದ ಆತ ಪದೇ ಪದೇ ರಸಗುಲ್ಲ ಕೇಳಲು ಬಂದಿದ್ದಾನೆ. ಇದರಿಂದ ರೊಚ್ಚಿಗೆದ್ದ ಅಡುಗೆ ಗುತ್ತಿಗೆದಾರ, ಮೊದಲು ಬಾಲಕನನ್ನು ಗದರಿಸಿದ್ದಾನೆ. ಬಾಲಕ ಬಗ್ಗದಿದ್ದಾಗ ಕೋಪದ ಉತ್ತುಂಗಕ್ಕೇರಿದ ಆತ, ಚಮನನ್ನು ಎತ್ತಿ ಉರಿಯುತ್ತಿದ್ದ ತಂದೂರಿ ಒಲೆ ಮೇಲೆ ಹಿಡಿದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬಾಲಕ ಕೆಂಡದಂತಿದ್ದ ಒಲೆಯೊಳಗೆ ಬಿದ್ದಿದ್ದಾನೆ.

ಬಾಲಕನ ಕಿರುಚಾಟ ಕೇಳಿ ಓಡಿ ಬಂದ ಜನರು ತಕ್ಷಣ ಆತನನ್ನು ಅಯೋಧ್ಯಾ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಆದರೆ ಮುಖದಿಂದ ಸೊಂಟದವರೆಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದರಿಂದ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ರವಾನಿಸಲಾಗಿದೆ. ಚಮನ್ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಿ ದೂರು ದಾಖಲಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ನಂತರ ಆರೋಪಿ ಅಡುಗೆ ಗುತ್ತಿಗೆದಾರ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಮುಗ್ಧ ಮಗುವಿನ ಮೇಲೆ ಈ ರೀತಿ ಕ್ರೂರವಾಗಿ ವರ್ತಿಸಿದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯೀಗ ಕಣ್ಣೀರಿನ ಕಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!