ಕೋಲ್ಕತ್ತಾ : ಕೋಲ್ಕತ್ತಾದ ಖುದಿರಾಮ್ ಅನುಶೀಲನ ಕೇಂದ್ರದಲ್ಲಿ ಏಳು ಉತ್ತರ ಹಾಗೂ ಪೂರ್ವ ಕೋಲ್ಕತ್ತಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಸಂಜೆ ಈ ಎಣಿಕೆ ಕೇಂದ್ರವು ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಸಂಘರ್ಷದ ತಾಣವಾಗಿ ಮಾರ್ಪಟ್ಟಿತು.
ಅಪರಿಚಿತ ವ್ಯಕ್ತಿಗಳು ಸ್ಟ್ರಾಂಗ್ ರೂಮ್‌ಗಳಿಗೆ ನುಗ್ಗಿ ಮತಯಂತ್ರಗಳನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷ ಆರೋಪಿಸಿದೆ. ಈ ವ್ಯಕ್ತಿಗಳು ಸ್ಟ್ರಾಂಗ್ ರೂಮ್‌ಗಳೊಳಗೆ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಟಿಎಂಸಿ ಸ್ಪಷ್ಟಪಡಿಸಿದೆ.
ಟಿಎಂಸಿಯ ಆರೋಪವನ್ನು ಸಿಇಒ ಮನೋಜ್ ಅಗರ್ವಾಲ್ ತಳ್ಳಿಹಾಕಿದ್ದಾರೆ. “ಮತಯಂತ್ರಗಳ ಭದ್ರತೆ ಬಗ್ಗೆ ಯಾವುದೇ ಸಂಶಯ ಪಡುವ ಅಗತ್ಯವಿಲ್ಲ. ಮೂರು ಹಂತದ ಕಠಿಣ ಭದ್ರತೆಯನ್ನು ಒದಗಿಸಲಾಗಿದ್ದು, ಅಧಿಕೃತ ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ಯಾರೂ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
ಟಿಎಂಸಿ ಅಭ್ಯರ್ಥಿಗಳಾದ ಶಶಿ ಪಾಂಜಾ ಮತ್ತು ಕುನಾಲ್ ಘೋಷ್ ಅವರು ರಸ್ತೆ ಬದಿ ಪ್ರತಿಭಟನೆ ನಡೆಸಿದರೆ, ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದ ಮತಪೆಟ್ಟಿಗೆಗಳನ್ನು ಇರಿಸಲಾದ ಶೇಖಾವತ್ ಸ್ಮಾರಕ ಹೈಸ್ಕೂಲ್‌ನಲ್ಲಿ ಸ್ವತಃ ನಿಗಾ ವಹಿಸಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಮಮತಾ ಅವರು ಬಿಜೆಪಿಯ ಸುವೇೆಂದು ಅಧಿಕಾರಿಯನ್ನು ಎದುರಿಸುತ್ತಿದ್ದಾರೆ. ಮೇ 4 ರವರೆಗೆ ತಮ್ಮ ಪಕ್ಷದ ಎಲ್ಲಾ 294 ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಮಮತಾ ಸೂಚನೆ ನೀಡಿದ್ದಾರೆ. ಇವಿಎಂ ಮತ್ತು ಅಂಚೆ ಮತಪತ್ರಗಳ ತಿರುಚುವಿಕೆಯ ಆರೋಪದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಉತ್ತರ ಚುನಾವಣಾ ಅಧಿಕಾರಿ ಸಿತಾ ಪಾಂಡೆ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

