ಮಡಿಕೇರಿ : ಶುಕ್ರವಾರ (ಮೇ 8, 2026) ಮುಂಜಾನೆ ಸುಮಾರು 4:45 ಗಂಟೆಗೆ ಬೆಂಗಳೂರಿನಿಂದ ಸುಳ್ಯದ ಕಡೆಗೆ ಸಾಗುತ್ತಿದ್ದ ಪೂರ್ಣಿಮಾ ಟ್ರಾವೆಲ್ಸ್‌ನ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಈ ದುರಂತ ಸಂಭವಿಸಿದೆ. ಮಡಿಕೇರಿ ಸಮೀಪದ ತಾಳತ್ತಮನೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 272 ರಲ್ಲಿ ಚಲಿಸುತ್ತಿದ್ದಾಗ ಚಾಲಕ ಶಿವಕುಮಾರ್ (50) ಅವರಿಗೆ ತೀವ್ರ ಹೃದಯಾಘಾತವಾಗಿದೆ.
ಹೃದಯಾಘಾತದಿಂದ ನರಳುತ್ತಿದ್ದರೂ ಚಾಲಕ ಶಿವಕುಮಾರ್ ಅವರು ಹತೋಟಿ ಕಳೆದುಕೊಂಡ ಬಸ್ಸನ್ನು ರಸ್ತೆ ಬದಿಯ ದಿಬ್ಬಕ್ಕೆ (ದರೆಗೆ) ಢಿಕ್ಕಿ ಹೊಡೆಸಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಬಸ್ ನಿಯಂತ್ರಣ ತಪ್ಪಿ ಪಕ್ಕದ ಪ್ರಪಾತಕ್ಕೆ ಉರುಳಿದ್ದರೆ ಭೀಕರ ದುರಂತ ಸಂಭವಿಸುತ್ತಿತ್ತು. ಚಾಲಕನ ಈ ಕೊನೆಯ ಕ್ಷಣದ ಸಾಹಸದಿಂದಾಗಿ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದ ಸ್ವಲ್ಪ ಹೊತ್ತಿನಲ್ಲೇ ಚಾಲಕ ಶಿವಕುಮಾರ್ ಕೊನೆಯುಸಿರೆಳೆದಿದ್ದಾರೆ. ಮೃತರು ಬೆಂಗಳೂರು ಮೂಲದವರಾಗಿದ್ದು, ಹಲವು ವರ್ಷಗಳಿಂದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಪ್ರಾಣ ಹೋಗುತ್ತಿದ್ದರೂ ಪ್ರಯಾಣಿಕರನ್ನು ರಕ್ಷಿಸಿದ ಚಾಲಕನ ಕಾರ್ಯಕ್ಕೆ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.
ಇದನ್ನು ಓದಿ : Bantwal : ಖಾಲಿ ಮನೆಗೆ ನುಗ್ಗಿದ ಕಳ್ಳರ ಅಟ್ಟಹಾಸ; 4.13 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು!

