ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಚಂದ್ರನಾಥ್ ರಥ್ ಹತ್ಯೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ ಪ್ರದೇಶದಲ್ಲಿ ಮೇ 6ರ ರಾತ್ರಿ ನಡೆದ ಈ ಹತ್ಯೆಯ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು (SIT) ಭಾನುವಾರ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ನಂತರ ಬಂಧಿಸಿದೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು “ಡಿಜಿಟಲ್ ಸುಳಿವುಗಳು ಮತ್ತು ಅಂತರರಾಜ್ಯ ಸಂಪರ್ಕಗಳನ್ನು” ಪತ್ತೆಹಚ್ಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇದು ತನಿಖೆಯಲ್ಲಿ ದೊರೆತ ದೊಡ್ಡ ಯಶಸ್ಸು. ಹಂತಕರು ಪಶ್ಚಿಮ ಬಂಗಾಳದ ಹೊರಗಿನವರು ಎಂಬ ಸುಳಿವು ತನಿಖೆಯ ವೇಳೆ ಲಭ್ಯವಾಗಿತ್ತು. ತಾಂತ್ರಿಕ ಕಣ್ಗಾವಲು ಮತ್ತು ಡಿಜಿಟಲ್ ಟ್ರ್ಯಾಕಿಂಗ್ ಆಧಾರದ ಮೇಲೆ ಎಸ್‌ಐಟಿ ಸದಸ್ಯರನ್ನು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಕಳುಹಿಸಲಾಗಿತ್ತು. ಅವರು ಉತ್ತರ ಪ್ರದೇಶದಿಂದ ಮೂವರನ್ನು ಬಂಧಿಸಿದ್ದಾರೆ. ಅವರನ್ನು ಟ್ರಾನ್ಸಿಟ್ ರಿಮಾಂಡ್ ಮೂಲಕ ಪಶ್ಚಿಮ ಬಂಗಾಳಕ್ಕೆ ಕರೆತರಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಬಂಧಿತರನ್ನು ಬಿಹಾರದ ಬಕ್ಸರ್ ಜಿಲ್ಲೆಯ ಪಾಂಡಿಯಾ ಪಟ್ಟಿಯ ನಿವಾಸಿ ವಿಶಾಲ್ ಶ್ರೀವಾಸ್ತವ ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರು ಉತ್ತರ ಪ್ರದೇಶದವರು ಎಂದು ತಿಳಿದುಬಂದಿದೆ. ಇವರಲ್ಲಿ ಒಬ್ಬ ಶಾರ್ಪ್‌ಶೂಟರ್ ಇರುವ ಶಂಕೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಕೊಲೆಯ ಸಂಚು ಮತ್ತು ಕೃತ್ಯದಲ್ಲಿ ಕನಿಷ್ಠ ಎಂಟು ಜನರು ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಹಂತಕರು ರಥ್ ಅವರನ್ನು ಗುರಿಯಾಗಿಸುವ ಮೊದಲು ವಿವರವಾದ ರೇಕ್ (ಮಾಹಿತಿ ಸಂಗ್ರಹಣೆ) ನಡೆಸಿದ್ದಾರೆ ಎಂದು ಪೊಲೀಸರು ನಂಬಿದ್ದಾರೆ.
“ಈ ಕೊಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾಗಿತ್ತು. ಹಂತಕರು ತಮ್ಮ ಗುರುತು ಮತ್ತು ಚಲನವಲನಗಳನ್ನು ಮರೆಮಾಚಲು ಹಲವು ಕ್ರಮಗಳನ್ನು ಕೈಗೊಂಡಿದ್ದರು. ಘಟನೆಗಳ ಸರಣಿಯನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಡಿಜಿಟಲ್ ಹೆಜ್ಜೆಗುರುತುಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಪುರಾವೆಗಳನ್ನು ಹೆಚ್ಚು ಅವಲಂಬಿಸಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ. ಬಂಧಿತರ ವಿಚಾರಣೆ ಸದ್ಯ ನಡೆಯುತ್ತಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಧ್ಯಮಗ್ರಾಮ ಕ್ರಾಸಿಂಗ್ ಬಳಿಯ ದೋಹಾರಿಯಾ ಪ್ರದೇಶದಲ್ಲಿ ರಥ್ ಅವರ ವಾಹನವನ್ನು ಕಾರೊಂದು ಅಡ್ಡಗಟ್ಟಿದ್ದರೆ, ಮೋಟಾರ್ ಸೈಕಲ್ ಪಕ್ಕದಲ್ಲೇ ಬಂದು ನಿಂತಿತ್ತು ಎನ್ನಲಾಗಿದೆ. ತನಿಖೆಯ ವೇಳೆ, ಹಂತಕರು ಬಳಸಿದ್ದಾರೆ ಎಂದು ಶಂಕಿಸಲಾದ ಕಾರು ಕೊಲೆಗಿಂತ ಮೊದಲು ಬಲಿ ಟೋಲ್ ಪ್ಲಾಜಾವನ್ನು ದಾಟಿರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಒಬ್ಬರು ಯುಪಿಐ (UPI) ವಹಿವಾಟಿನ ಮೂಲಕ ಟೋಲ್ ಪಾವತಿಸಿದ್ದರು.
“ಆ ಡಿಜಿಟಲ್ ಪಾವತಿಯು ತನಿಖಾಧಿಕಾರಿಗಳಿಗೆ ಮೊಬೈಲ್ ಸಂಖ್ಯೆಯನ್ನು ಗುರುತಿಸಲು ಮತ್ತು ಶಂಕಿತರಲ್ಲಿ ಒಬ್ಬನ ಗುರುತನ್ನು ಪತ್ತೆಹಚ್ಚಲು ಸಹಾಯ ಮಾಡಿತು. ಈ ಕೊಂಡಿಯು ಅಂತಿಮವಾಗಿ ನಮ್ಮ ತಂಡವನ್ನು ಆರೋಪಿಗಳ ಬಳಿಗೆ ಕೊಂಡೊಯ್ಯಿತು” ಎಂದು ಅಧಿಕಾರಿ ತಿಳಿಸಿದ್ದಾರೆ. ಪತ್ತೆದಾರಿಗಳು ಈಗ ಬಂಧಿತ ವ್ಯಕ್ತಿಗಳ ಗುರುತನ್ನು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಟೋಲ್ ಪ್ಲಾಜಾದಲ್ಲಿ ಸೆರೆಯಾದ ವಾಹನ ಮತ್ತು ಅದರಲ್ಲಿದ್ದವರ ಚಿತ್ರಗಳೊಂದಿಗೆ ತಾಳೆ ನೋಡುತ್ತಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಎರಡು ದಿನಗಳ ನಂತರ ರಥ್ ಅವರನ್ನು ಮಧ್ಯಮಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಉಳಿದ ಶಂಕಿತರನ್ನು ಪತ್ತೆಹಚ್ಚಲು ಎಸ್‌ಐಟಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ದಾಳಿಗಳನ್ನು ಮುಂದುವರಿಸಿದೆ ಎಂದು ಅಧಿಕಾರಿ ಸೇರಿಸಿದ್ದಾರೆ.

