ಹುಬ್ಬಳ್ಳಿ : ರಾಜ್ಯ ಸರ್ಕಾರದ ಈ ಅನಿರೀಕ್ಷಿತ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಟುವಾಗಿ ಟೀಕಿಸಿದ್ದು, ಇದು ಕೇವಲ ಮತಬ್ಯಾಂಕ್ ತುಷ್ಟೀಕರಣದ ರಾಜಕಾರಣ ಎಂದು ಕಿಡಿಕಾರಿದ್ದಾರೆ. ಮಕ್ಕಳಲ್ಲಿ ಧರ್ಮದ ಆಧಾರದಲ್ಲಿ ಭೇದಭಾವ ಮೂಡಿಸುವ ಈ ಆದೇಶವು ಶಾಲಾ ಆವರಣದಲ್ಲಿರುವ ಶಾಂತಿ-ಸುವ್ಯವಸ್ಥೆಯನ್ನು ಹದಗೆಡಿಸಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ಚರ್ಚೆಯಲ್ಲಿರುವಾಗಲೇ ಸರ್ಕಾರ ಇಂತಹ ಬೇಜವಾಬ್ದಾರಿ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಬೊಮ್ಮಾಯಿ ಅವರ ಈ ಹೇಳಿಕೆಯ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಹಿಂದೂ ಪರ ಸಂಘಟನೆಗಳು ವಿನೂತನವಾಗಿ ಪ್ರತಿಭಟನೆ ನಡೆಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರಗಳಿಗೆ ಹಿಜಾಬ್ ಧರಿಸುವ ಮೂಲಕ ಪ್ರತಿಭಟನಾಕಾರರು ಸರ್ಕಾರದ ನಿರ್ಧಾರಕ್ಕೆ ವ್ಯಂಗ್ಯವಾಡಿದ್ದಾರೆ. “ಹಲೋ ಮಿಸ್ಟರ್ ಸಿದ್ದರಾಮಯ್ಯ, ಹೇಳಿದ್ದೇನು.. ಮಾಡಿದ್ದೇನು?” ಎನ್ನುವ ಘೋಷಣೆಗಳೊಂದಿಗೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಹಿಡಿದು ಬೀದಿಗಿಳಿದಿದ್ದಾರೆ.
ಈ ಪ್ರತಿಭಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಒಂದು ಕಡೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವವರು “ನುಡಿದಂತೆ ನಡೆದಿದ್ದೇವೆ” ಎಂದು ಕೊಂಡಾಡುತ್ತಿದ್ದರೆ, ಇನ್ನೊಂದು ಕಡೆ “ಶಿಕ್ಷಣದ ಹೆಸರಲ್ಲಿ ಧರ್ಮ ರಾಜಕಾರಣ ಬೇಡ” ಎಂದು ವಿರೋಧ ವ್ಯಕ್ತವಾಗುತ್ತಿದೆ. ಈ ಹಿಜಾಬ್ ಕಿಚ್ಚು ಈಗ ಕೇವಲ ಶಾಲಾ ಆವರಣಕ್ಕೆ ಸೀಮಿತವಾಗದೆ, ರಾಜ್ಯದ ಪ್ರಮುಖ ನಗರಗಳಲ್ಲೂ ಪ್ರತಿಭಟನೆಯ ರೂಪ ಪಡೆದುಕೊಳ್ಳುತ್ತಿದೆ.
ಇದನ್ನು ಓದಿ : Basavaraj Bommai Hijab Controversy : ಶಾಲೆಗಳಲ್ಲಿ ಹಿಜಾಬ್‌ಗೆ ಅವಕಾಶ; ಸರ್ಕಾರದ ನಿರ್ಧಾರ ಬೇಜವಾಬ್ದಾರಿ!



