ಬಂಟ್ವಾಳ :ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಮೃತಪಟ್ಟವರನ್ನು ಉಳ್ಳಾಲ ತಾಲೂಕಿನ ಇರಾ ಗ್ರಾಮದ ಪಾತ್ರಾಡಿ ನಿವಾಸಿ ಮಿಥುನ್ ಪೂಜಾರಿ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಮಿಥುನ್ ಅವರು ರಂಗಭೂಮಿಯ ವಿವಿಧ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದು, ಸ್ಥಳೀಯವಾಗಿ ಹಲವು ನಾಟಕ ತಂಡಗಳಲ್ಲಿ ನಟಿಸಿ ಉತ್ತಮ ಅಭಿನಯದ ಮೂಲಕ ಗುರುತಿಸಿಕೊಂಡಿದ್ದರು.
ಮಿಥುನ್ ಪೂಜಾರಿ ಅವರು ಇತ್ತೀಚೆಗಷ್ಟೇ ಇರಾ ಗ್ರಾಮದಲ್ಲಿ ಹೊಸ ಮನೆ ನಿರ್ಮಿಸಿ ಅಲ್ಲಿಗೆ ವಾಸ್ತವ್ಯ ಬದಲಿಸಿದ್ದರು. ಆದರೆ, ಮಂಚಿ ಸಮೀಪವಿದ್ದ ತಮ್ಮ ಹಳೆಯ ಮನೆಯ ತೋಟಕ್ಕೆ ನೀರುಣಿಸುವ ಕೆಲಸಕ್ಕಾಗಿ ಅವರು ಆಗಾಗ ಭೇಟಿ ನೀಡುತ್ತಿದ್ದರು. ಎಂದಿನಂತೆ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಮಿಥುನ್ ಅವರು ಸಂಜೆಯಾದರೂ ವಾಪಸ್ ಬರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹಳೆಯ ಮನೆಗೆ ತೆರಳಿ ಪರಿಶೀಲಿಸಿದಾಗ, ಅವರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತರು ಪತ್ನಿ ಹಾಗೂ ಎರಡು ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ. ಉತ್ತಮ ಕಲಾವಿದನ ಅಕಾಲಿಕ ನಿಧನವು ರಂಗಭೂಮಿ ವಲಯದಲ್ಲಿ ಮತ್ತು ಸ್ಥಳೀಯವಾಗಿ ತೀವ್ರ ಶೋಕವನ್ನುಂಟು ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.