HomeLOCALBeltangady Minor Assault Case : ಅಪ್ರಾಪ್ತ ವಯಸ್ಕನ ಮೇಲೆ ಗುಂಪೊಂದು ಹಲ್ಲೆ - ಇಬ್ಬರು...

Beltangady Minor Assault Case : ಅಪ್ರಾಪ್ತ ವಯಸ್ಕನ ಮೇಲೆ ಗುಂಪೊಂದು ಹಲ್ಲೆ – ಇಬ್ಬರು ಬಲಪಂಥೀಯ ಕಾರ್ಯಕರ್ತರ ಬಂಧನ, ಜಾಮೀನು ಮಂಜೂರು

ಬೆಳ್ತಂಗಡಿ : ಬೆಳ್ತಂಗಡಿಯ ಉಜಿರೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಯನ್ನು ಅಪಹರಿಸಿ, ಬರ್ಬರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದೇವಸ್ಥಾನದ ಉತ್ಸವದ ವೇಳೆ ಬೈಕ್‌ನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದರಿಂದ ಬೆದರಿದ ಬಾಲಕ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದನು. ಸದ್ಯ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

 

ಏನಿದು ಘಟನೆ?

ಉಜಿರೆಯ ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ ಮಾರ್ಚ್ 11 ರಂದು ತನ್ನ ಸ್ನೇಹಿತರೊಂದಿಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದನು. ರಾತ್ರಿ ಸುಮಾರು 8:30ರ ವೇಳೆಗೆ ಆತನ ಸ್ನೇಹಿತರು ಜೈಂಟ್ ವೀಲ್ ಏರಿದ್ದಾಗ, ಈತ ಕೆಳಗೆ ನಿಂತು ಅವರ ಮೊಬೈಲ್ ಫೋನ್‌ಗಳನ್ನು ಹಿಡಿದುಕೊಂಡಿದ್ದನು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಗಳಾದ ರಮೇಶ್ ಪೂಜಾರಿ ಮತ್ತು ಗೌರವ್ ಶೆಟ್ಟಿ ವಿದ್ಯಾರ್ಥಿಯನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಪಹರಣ ಮತ್ತು ಹಲ್ಲೆ

ದೂರುದಾರರ ಪ್ರಕಾರ, ಆರೋಪಿಗಳು ವಿದ್ಯಾರ್ಥಿಯನ್ನು ಬೈಕ್‌ನಲ್ಲಿ ಸುಮಾರು 5 ಕಿಲೋಮೀಟರ್ ದೂರದ ನಿರ್ಜನ ಪ್ರದೇಶಕ್ಕೆ ಅಪಹರಿಸಿಕೊಂಡು ಹೋಗಿದ್ದಾರೆ. ಅಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸೇರಿ ವಿದ್ಯಾರ್ಥಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಲ್ಲದೆ, ಆತನ ವಿಡಿಯೋ ಚಿತ್ರೀಕರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ತಡರಾತ್ರಿ ಉಜಿರೆಯ ಬೆಳಾಲು ಕ್ರಾಸ್ ಬಳಿ ವಿದ್ಯಾರ್ಥಿಯನ್ನು ಬಿಟ್ಟು ಹೋಗುವಾಗ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಬಾಲಕ

ಘಟನೆಯಿಂದ ತೀವ್ರವಾಗಿ ಬೆದರಿದ ವಿದ್ಯಾರ್ಥಿಯು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವಿಷಯ ಮನೆಯವರ ಗಮನಕ್ಕೆ ಬಂದ ತಕ್ಷಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಮಾರ್ಚ್ 26 ರಂದು ಆರೋಪಿಗಳಾದ ರಮೇಶ್ ಪೂಜಾರಿ (43) ಮತ್ತು ಗೌರವ್ ಶೆಟ್ಟಿ (25) ಎಂಬುವವರನ್ನು ಅಟ್ಟಾಜೆ ಎಂಬಲ್ಲಿ ಬಂಧಿಸಿದ್ದಾರೆ.

ನ್ಯಾಯಾಲಯದಿಂದ ಜಾಮೀನು

ಬಂಧಿತ ಇಬ್ಬರು ಆರೋಪಿಗಳನ್ನು ಗುರುವಾರ ಸಂಜೆಯೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣವು ಉಜಿರೆ ಭಾಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments