ಕಾಸರಗೋಡು: ಜಿಲ್ಲೆಯಲ್ಲಿ ಓಣಂ ಹಬ್ಬದ ಸಂಭ್ರಮ ಮನೆಮಾಡಿದ್ದ ವೇಳೆಯಲ್ಲೇ ಮನಕಲಕುವ ಘೋರ ದುರಂತವೊಂದು ಸಂಭವಿಸಿದೆ. ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು 15 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಮೃತ ಬಾಲಕನನ್ನು ಚೀಮೇನಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಕ್ಕಾಡ್ ಅನಾಕಡಿಯ ಧನೇಶ್ ಎಂಬವರ ಪುತ್ರ ಸನೂಪ್ (15) ಎಂದು ಗುರುತಿಸಲಾಗಿದೆ. ಈತ ತಿಮಿರಿ ಕುಟ್ಟಮ್ಮತ್ತು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ.
ಗುರುವಾರ ರಾತ್ರಿ ನಡೆದಿದ್ದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಸನೂಪ್ ಭಾಗವಹಿಸಿದ್ದ. ಕಾರ್ಯಕ್ರಮದ ನಡುವೆ ಆತ ತನ್ನ ಸಹಪಾಠಿಗಳೊಂದಿಗೆ ಹೊರಗೆ ಬಂದಿದ್ದ ಸಂದರ್ಭದಲ್ಲಿ, ಸಮೀಪದಲ್ಲೇ ಮುಚ್ಚಳವಿಲ್ಲದೆ ತೆರೆದಿದ್ದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಪಡೆಯ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಗಂಭೀರ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಕಣ್ಣೂರಿನ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಹಬ್ಬದ ದಿನವೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.