ಮಂಗಳೂರು : ರಾಜ್ಯಾದ್ಯಂತ ಈಗಾಗಲೇ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ದಾಳಿಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೇ ಔಷಧಿಗಳ ಸುರಕ್ಷತೆಯ ತಪಾಸಣೆಯೂ ಮುಂದುವರಿಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮಂಗಳೂರಿನ ಪ್ರಜಾಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಹಾರದ ಜೊತೆ ಔಷಧಿಗಳ ಕುರಿತು ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ದೂರು ನೀಡಲು ಕ್ಯೂಆರ್ ಕೋಡ್ (QR Code) ವ್ಯವಸ್ಥೆ ಮಾಡಲಾಗಿದೆ ಎಂದರು.
ಕೆಲವು ಕಂಪನಿಗಳಲ್ಲಿ ಅವಧಿ ಮೀರಿ ಔಷಧ ಮಾರಾಟ, ಮಿಸ್ ಲೇಬಲಿಂಗ್ ಹಾಗೂ ದುಬಾರಿ ದರದ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ. ಸರಿಯಾದ MRP ಇಲ್ಲದಿರುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ, ಈ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಾಗುವುದು. ಇಂತಹ ಔಷಧ ಪೂರೈಕೆ ನಿಯಂತ್ರಣ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಸಂಪೂರ್ಣ ಸ್ಥಿತಿಗತಿಯ ವಿವರವನ್ನು ಕೇಂದ್ರಕ್ಕೆ ನೀಡಿ ಕಠಿಣ ಕ್ರಮ ವಹಿಸಲು ಮನವಿ ಮಾಡಲಾಗುವುದು ಎಂದು ಖಾದರ್ ಸ್ಪಷ್ಟಪಡಿಸಿದರು.
ಇದನ್ನು ಓದಿ : Malpe : ಹೂಡೆ ಸಮೀಪ ರಸ್ತೆ ಬದಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆ; ಉಡುಪಿ ಆಸ್ಪತ್ರೆಗೆ ದಾಖಲು!