ಉಡುಪಿ : ನಾಲ್ಕೂರು ಗ್ರಾಮದ ನಿವಾಸಿ ರವಿಚಂದ್ರ ಅವರಿಗೆ ದಿನಾಂಕ 29/06/2026 ರಂದು ಎಮ್. ಸಾಯಿಕೃಷ್ಣ ಎಂಬಾತ ಮೊಬೈಲ್ ಕರೆ ಮಾಡಿದ್ದನು. ಉಡುಪಿ-ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಕಾಂಪ್ಲೆಕ್ಸ್‌ನಲ್ಲಿ ಅಮೆಜಾನ್ ಆನ್‌ಲೈನ್ ಹಬ್ ಫ್ರಾಂಚೈಸಿ ಮಾಡಿಸಿಕೊಡುವುದಾಗಿ ಆಮಿಷವೊಡ್ಡಿದ್ದನು. ಮೊದಲಿಗೆ ರವಿಚಂದ್ರ ಅವರು ಇದನ್ನು ನಿರಾಕರಿಸಿದರೂ, ಮತ್ತೆ ಕರೆ ಮಾಡಿದ ವಂಚಕರು “ಮೊದಲು ಆನ್‌ಲೈನ್ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು, ನಂತರ ಕಂಪನಿಯ ಫೀಲ್ಡ್ ಆಫೀಸರ್ ಖುದ್ದಾಗಿ ಬಂದು ಒಪ್ಪಂದ ಪತ್ರ ಹಾಗೂ ಏರಿಯಾ ಪಿನ್ ಕೋಡ್ ಲಾಕ್ ಮಾಡಿಕೊಡುತ್ತಾರೆ” ಎಂದು ಬಲವಾಗಿ ನಂಬಿಸಿದ್ದಾರೆ.
ವಂಚಕರ ಮಾತನ್ನು ನಂಬಿದ ರವಿಚಂದ್ರ ಅವರಿಂದ ಆರೋಪಿಗಳಾದ ಎಮ್. ಸಾಯಿಕೃಷ್ಣ, ಎಮ್. ಗುರುಸ್ವಾಮಿ, ಸುರೇಶ್ ಕುಮಾರ್, ರಾಜ್ ಕುಮಾರ್ ಹಾಗೂ ಮಹೇಶ್ ಎಂಬ ಐವರು ಸೇರಿ ಹಂತ-ಹಂತವಾಗಿ ಒಟ್ಟು 4,20,000 ರೂಪಾಯಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಹಣ ಕೈಸೇರಿದ ನಂತರ ಯಾವುದೇ ಫ್ರಾಂಚೈಸಿ ನೀಡದೆ ವಂಚಿಸಿರುವುದು ತಿಳಿದುಬಂದಿದೆ. ಈ ಬಗ್ಗೆ ರವಿಚಂದ್ರ ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 133/2026 ರಂತೆ BNS ಕಲಂ 316(1), 316(2), 318(1), 318(2), 318(3), 318(4), 319 ಜೊತೆಗೆ 3(5) ರ ಅಡಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನು ಓದಿ :Udupi | ನಿಟ್ಟೂರು ಅಪಘಾತ ಪ್ರಕರಣ: ಪದವಿ ವಿದ್ಯಾರ್ಥಿಯ ಅಕಾಲಿಕ ನಿಧನ; ಉಡುಪಿ ಸಂಚಾರ ಪೊಲೀಸರಿಂದ ತನಿಖೆ