ಉಡುಪಿ : ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರ ಅತ್ಯಂತ ಘೋರ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕರಾವಳಿ ಜನತೆಯನ್ನು ತೀವ್ರ ಆಘಾತಕ್ಕೀಡುಮಾಡಿದೆ. ಉಡುಪಿ ಮೂಲದ ಪ್ರಕಾಶ್ ಕುಂದಾರ್ ಎಂಬವರ ಶವ ಅವರದ್ದೇ ಕಾರಿನಲ್ಲಿ ಇರಿದು, ತುಂಡರಿಸಿದ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಕಾಶ್ ಕುಂದಾರ್ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದು, ಅವರ ಪತ್ನಿ ಟೀನಾ ಶಿಕ್ಷಕಿಯಾಗಿದ್ದರು. ಸುಮಾರು ೨೦ ವರ್ಷಗಳಿಂದ ವಿವಾಹವಾಗಿದ್ದ ಈ ದಂಪತಿಗೆ ೧೦ನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಮಗನಿದ್ದಾನೆ. ಜುಲೈ ೨೦ ರ ಸುಮಾರಿಗೆ ಪ್ರಕಾಶ್ ತಮ್ಮ ಸಹೋದರನಿಗೆ ವಾಡಿಕೆಯಂತೆ ಧ್ವನಿ ಸಂದೇಶ ಕಳುಹಿಸುವ ಬದಲು ಟೆಕ್ಸ್ಟ್ ಮೆಸೇಜ್ ಕಳುಹಿಸಿದ್ದರು. ಸಹೋದರ ಫೋನ್ ಕಾಲ್ ಮಾಡಲು ಒತ್ತಾಯಿಸಿದಾಗ ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಂಡಿತ್ತು.
ಅನುಮಾನಗೊಂಡ ಸಂಬಂಧಿಕರು ಕಂಪನಿಯನ್ನು ವಿಚಾರಿಸಿದಾಗ, ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಅವರು ಊರಿಗೆ ತಲುಪದೇ ಇದ್ದಾಗ ಶಾರ್ಜಾ ಪೊಲೀಸರಿಗೆ ದೂರು ನೀಡಲಾಯಿತು. ತನಿಖೆ ನಡೆಸಿದ ಪೊಲೀಸರಿಗೆ ಪ್ರಕಾಶ್ ಅವರ ಶವ ಕಾರಿನೊಳಗೆ ತುಂಡರಿಸಿದ ಸ್ಥಿತಿಯಲ್ಲಿ ಸಿಕ್ಕಿದೆ. ಇದೀಗ ಅವರ ಪತ್ನಿ ಟೀನಾ ಹಾಗೂ ಮಗ ನಾಪತ್ತೆಯಾಗಿದ್ದು, ಕೊಲೆಯಲ್ಲಿ ಪತ್ನಿಯ ಪಾತ್ರವಿದೆಯೇ ಅಥವಾ ಭಾರತಕ್ಕೆ ಪರಾರಿಯಾಗಿದ್ದಾರೆಯೇ ಎಂಬ ಕೋನದಲ್ಲಿ ಶಾರ್ಜಾ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.