Mangaluru : ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೦೧೭ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ೯ ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಜೋಡು ರಸ್ತೆ, ಕೆಳಗಿನ ಅಂಗಡಿ ಮನೆ ನಿವಾಸಿ, ದಿವಂಗತ ಸದಾಶಿವ ಆಚಾರ್ಯ ಅವರ ಪುತ್ರ ಪಾರ್ಥ ಅಲಿಯಾಸ್ ಪಾರ್ಥಸಾರಥಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ೨೦೧೭ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೨೪, ೩೨೬ ಹಾಗೂ ೫೦೪ ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣ ದಾಖಲಾದಂದಿನಿಂದ ಈತ ತಲೆಮರೆಸಿಕೊಂಡಿದ್ದನು.
೨ನೇ ಸಿಜೆಎಂ ನ್ಯಾಯಾಲಯವು ಹೊರಡಿಸಿದ್ದ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣದ (LPC) ವಾರಂಟ್ ಆಧಾರದ ಮೇಲೆ, ಎಎಸ್‌ಐ ಗಣೇಶ್, ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಹಾಗೂ ಕಾನ್‌ಸ್ಟೇಬಲ್ ಮಲ್ಲಿಕ್ ಜಾನ್ ಅವರಿದ್ದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಕದ್ರಿ ಮೈದಾನದ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನು ಓದಿ : Udupi : ಶಾರ್ಜಾದಲ್ಲಿ ಉಡುಪಿ ವ್ಯಕ್ತಿಯ ಭೀಕರ ಕೊಲೆ: ಪತ್ನಿ, ಮಗ ನಾಪತ್ತೆ!