ಮಂಗಳೂರು ಮೇ 22 : ತೀರ್ಪುಗಳ ಮೂಲಕವೇ ಕಾನೂನು ಲೋಕದಲ್ಲಿ ಮೈಲಿಗಲ್ಲು ನೆಟ್ಟಿದ್ದ ಹೈಕೋರ್ಟ್ ನಿವೃತ್ತ ನ್ಯಾಯಾಧೀಶೆ ಬಿ.ಎಸ್. ಇಂದ್ರಕಲಾ ಅವರು ವಾಷಿಂಗ್ಟನ್‌ನಲ್ಲಿ ಕೊನೆಯುಸಿರೆಳೆದಿದ್ದು, ಮೃತರು ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದ್ರಕಲಾ ಅವರು ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ (Principal District Judge) ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ನೀಡಿದ್ದ ಒಂದು ಐತಿಹಾಸಿಕ ತೀರ್ಪು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.
ಕರಾವಳಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾಗಿದ್ದ ‘ವಾಮಂಜೂರು ಕುಟುಂಬದ ಸಾಮೂಹಿಕ ಹತ್ಯೆ’ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಇಂದ್ರಕಲಾ ಅವರು, ನಾಲ್ವರನ್ನು ಕ್ರೂರವಾಗಿ ಕೊಂದಿದ್ದ ಮುಖ್ಯ ಆರೋಪಿ ವಾಮಂಜೂರು ಪ್ರವೀಣ್‌ಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಕಡಕ್ ತೀರ್ಪು ಪ್ರಕಟಿಸಿದ್ದರು. ಅಪರೂಪದಲ್ಲಿ ಅಪರೂಪದ ಈ ಪ್ರಕರಣದಲ್ಲಿ ಅವರು ನೀಡಿದ್ದ ತೀರ್ಪು ಇಡೀ ದೇಶದ ನ್ಯಾಯಾಂಗ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿತ್ತು.
ನ್ಯಾಯಾಧೀಶೆ ಇಂದ್ರಕಲಾ ಅವರು ಕಳೆದ ಕೆಲವು ಸಮಯದಿಂದ ತಮ್ಮ ಕುಟುಂಬದ ಸದಸ್ಯರ ಜೊತೆ ಅಮೆರಿಕದಲ್ಲಿ ವಾಸವಾಗಿದ್ದರು. ಮೃತರ ಅಂತ್ಯಕ್ರಿಯೆಯು ಅಮೆರಿಕದ ಬೆಥೆಸ್ಡಾ ಮೇರಿಲ್ಯಾಂಡ್‌ನಲ್ಲಿ (Bethesda, Maryland) ನೆರವೇರಲಿದೆ ಎಂದು ಅವರ ಕುಟುಂಬದ ಆಪ್ತ ಮೂಲಗಳು ಮಾಹಿತಿ ನೀಡಿವೆ. ಇವರ ನಿಧನಕ್ಕೆ ಕರಾವಳಿಯ ಕಾನೂನು ತಜ್ಞರು, ವಕೀಲರ ಸಂಘ ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ : Panemangalore : ನೇತ್ರಾವತಿ ನದಿಯಲ್ಲಿ ಗೂಡಿನಬಳಿಯ ಯುವಕ ಇರ್ಫಾನ್ ಮೃತದೇಹ ಪತ್ತೆ!



