Homeತಾಜಾ ಸುದ್ದಿMadhya Pradesh : ಸಿಧಿಯಲ್ಲಿ 53 ತಾಯಂದಿರ ಭೀಕರ ಸಾವು; ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ...

Madhya Pradesh : ಸಿಧಿಯಲ್ಲಿ 53 ತಾಯಂದಿರ ಭೀಕರ ಸಾವು; ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ NHRC!

ನವದೆಹಲಿ : ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ 2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗಿನ ಕೇವಲ ಒಂದು ವರ್ಷದ ಅವಧಿಯಲ್ಲಿ ಹೆರಿಗೆಗೆ ಮೊದಲು, ಹೆರಿಗೆಯ ವೇಳೆ ಅಥವಾ ಹೆರಿಗೆಯ ನಂತರ 53 ಮಹಿಳೆಯರು ಸಾವನ್ನಪ್ಪಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಆಘಾತಕಾರಿ ವರದಿಗಳ ಆಧಾರದ ಮೇಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ಘಟನೆಯನ್ನು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆದಿರುವ ಆಯೋಗವು, ಮುಂದಿನ ಎರಡು ವಾರಗಳ ಒಳಗಾಗಿ ಇಡೀ ಪ್ರಕರಣದ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಕಠಿಣ ನೋಟಿಸ್ ಜಾರಿ ಮಾಡಿದೆ. ಮೃತಪಟ್ಟ 53 ತಾಯಂದಿರ ಸರಾಸರಿ ವಯಸ್ಸು ಕೇವಲ 26 ವರ್ಷಗಳಾಗಿದ್ದು, ಇವರಲ್ಲಿ ಹೆಚ್ಚಿನವರು ಮೊದಲ ಅಥವಾ ಎರಡನೇ ಬಾರಿ ತಾಯಂದಿರಾಗಿದ್ದ ಯುವತಿಯರು ಎಂಬುದು ಹೆರಿಗೆ ವ್ಯವಸ್ಥೆಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಸಿಧಿ ಜಿಲ್ಲೆಯಲ್ಲಿ ಸಂಭವಿಸಿರುವ ಈ ಸಾಲು ಸಾಲು ಸಾವುಗಳಿಗೆ ಮುಖ್ಯವಾಗಿ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಹಾಗೂ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯಗಳ ತೀವ್ರ ಅಭಾವವೇ ಕಾರಣ ಎಂದು ಆಯೋಗವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು, ಸ್ತ್ರೀರೋಗ ತಜ್ಞರು ಮತ್ತು ತಾಂತ್ರಿಕ ಸಿಬ್ಬಂದಿಯ ಕೊರತೆ ಎದ್ದುಕಾಣುತ್ತಿದೆ. ಇದರಿಂದಾಗಿ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ರೇವಾ ಜಿಲ್ಲೆಯ ವೈದ್ಯಕೀಯ ಕೇಂದ್ರಗಳಿಗೆ ಸಾಗಿಸಬೇಕಾಗುತ್ತಿದ್ದು, ಸಾರಿಗೆ ವಿಳಂಬದಿಂದಾಗಿ ದಾರಿಯಲ್ಲೇ ಜೀವ ಹೋಗುವ ಪರಿಸ್ಥಿತಿ ಇದೆ. ಇದಲ್ಲದೆ, ದೂರದ ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಇಲ್ಲದ ಕಾರಣ, ಮಳೆಗಾಲದಲ್ಲಂತೂ ಗರ್ಭಿಣಿಯರನ್ನು ಆಂಬುಲೆನ್ಸ್ ಇರುವ ಜಾಗಕ್ಕೆ ತಲುಪಿಸಲು 2 ರಿಂದ 3 ಕಿಲೋಮೀಟರ್ ದೂರ ಹಾಸಿಗೆಗಳಲ್ಲೇ ಹೊತ್ತುಕೊಂಡು ಹೋಗಬೇಕಾದ ನರಕಸದೃಶ ಸ್ಥಿತಿ ಇದೆ.

ಈ ಮಹಾ ದುರಂತದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಭಾರಿ ರಾಜಕೀಯ ಚಕಮಕಿ ಆರಂಭವಾಗಿದೆ. NHRC ಕ್ರಮವನ್ನು ಸ್ವಾಗತಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಉಮಂಗ್ ಸಿಂಘರ್ ಅವರು, ರಾಜ್ಯದ ಆರೋಗ್ಯ ಸೇವೆಯ ದುಸ್ಥಿತಿಯ ಬಗ್ಗೆ ತಾವಿಟ್ಟಿದ್ದ ಕಳವಳಕ್ಕೆ ಈಗ ಸಾಕ್ಷಿ ಸಿಕ್ಕಂತಾಗಿದೆ ಎಂದಿದ್ದಾರೆ. ಕೇವಲ ಸಿಧಿ ಜಿಲ್ಲೆಯಷ್ಟೇ ಅಲ್ಲದೆ ಇಡೀ ರಾಜ್ಯಾದ್ಯಂತ ಮಾತೃ ಆರೋಗ್ಯ ಸೇವೆಗಳ ಉನ್ನತ ಮಟ್ಟದ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ರಾಜ್ಯದ ಆಡಳಿತಾರೂಢ ಬಿಜೆಪಿ ವಕ್ತಾರ ಹಿತೇಶ್ ಬಾಜಪೈ ಅವರು, ಕಳೆದ ಎರಡು ದಶಕಗಳಲ್ಲಿ ಮಾತೃ ಮರಣ ಪ್ರಮಾಣದಲ್ಲಿ ಸುಧಾರಣೆಯಾಗಿದ್ದರೂ, ದೂರದ ಬುಡಕಟ್ಟು ಪ್ರದೇಶಗಳಲ್ಲಿ ಸವಾಲುಗಳು ಮುಂದುವರಿದಿವೆ ಎಂದು ಒಪ್ಪಿಕೊಂಡಿದ್ದಾರೆ. ಗರ್ಭಿಣಿಯರಲ್ಲಿ ಕಂಡುಬರುತ್ತಿರುವ ರಕ್ತಹೀನತೆ, ಅಪೌಷ್ಟಿಕತೆ ಹಾಗೂ ತಜ್ಞ ವೈದ್ಯರ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಹಾಗೂ ಸೌಲಭ್ಯ ವಿಸ್ತರಣೆಯ ಮೂಲಕ ಸರ್ಕಾರ ಈ ಸವಾಲನ್ನು ಎದುರಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Read This : Mangalore : ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ – ಸ್ಪೀಕರ್ ಯು.ಟಿ.ಖಾದರ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments