ಬಂಟ್ವಾಳ : ಬಂಟ್ವಾಳ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದ ಪೊಲೀಸ್ ತಂಡವು ಜೂನ್ 4ರ ಸಂಜೆ ಮೆಲ್ಕಾರ್ ಫ್ಲೈಓವರ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಭೀಕರ ಡ್ರಗ್ಸ್ ದಂಧೆ ಬಯಲಿಗೆ ಬಂದಿದೆ. ಸಂಶಯಾಸ್ಪದವಾಗಿ ಬಂದ ಕಾರೊಂದನ್ನು ತಡೆದು ನಿಲ್ಲಿಸಿದ ಪೊಲೀಸರು ತಪಾಸಣೆ ನಡೆಸಿದಾಗ, ಕಾರಿನಲ್ಲಿದ್ದ ಮೂವರು ತೀವ್ರ ನಡುಕ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಕಾರನ್ನು ಜಾಲಾಡಿದ ಪೊಲೀಸರಿಗೆ ನಿಷೇಧಿತ ಮಾದಕ ದ್ರವ್ಯ ಸೇವಿಸಲು ಬಳಸುವ ಉಪಕರಣಗಳು ಪತ್ತೆಯಾಗಿವೆ. ಮತ್ತಷ್ಟು ತೀವ್ರ ಶೋಧ ನಡೆಸಿದಾಗ ಬರೋಬ್ಬರಿ 76 ಗ್ರಾಂ ಮತ್ತು 40 ಮಿಲಿಗ್ರಾಂ ತೂಕದ ಅತ್ಯಂತ ದುಬಾರಿ ಎಂಡಿಎಂಎ (MDMA) ಡ್ರಗ್ಸ್ ಪತ್ತೆಯಾಗಿದ್ದು, ಇದರ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 7,64,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ಪುದು ನಿವಾಸಿ ಎ. ಜುಬೈರ್ (39), ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಮತ್ತು ಬಿ. ಮೂಡಾ ನಿವಾಸಿ ಬಿ.ಎಂ. ರಶೀದ್ ಅಲಿಯಾಸ್ ಮಾರಿಮುತ್ತು ಎಂದು ಗುರುತಿಸಲಾಗಿದೆ. ತೀವ್ರ ವಿಚಾರಣೆಯ ವೇಳೆ, ಅತಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡಿ ಹಣ ಮಾಡುವ ದುರುದ್ದೇಶದಿಂದ ಈ ಭೀಕರ ಮಾದಕ ವಸ್ತುವನ್ನು ಸಾಗಿಸುತ್ತಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪೊಲೀಸರು ಡ್ರಗ್ಸ್ ಜೊತೆಗೆ ಸಾಗಾಟಕ್ಕೆ ಬಳಸಿದ ಕಾರು (KA-19-MR-1997) ಹಾಗೂ ಮೂರು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.



