ರಿಯಾದ್ : ಹೊಸದಾಗಿ ನಿರ್ಮಿಸಲಾದ ತನ್ನ ಕನಸಿನ ಮನೆಯ ಗೃಹಪ್ರವೇಶ ಹಾಗೂ ಸ್ವಂತ ಮದುವೆಯ ಸಂಭ್ರಮಕ್ಕಾಗಿ ತಾಯ್ನಾಡಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದ ಕೇರಳ ಮೂಲದ ಯುವಕನೋರ್ವ ಸೌದಿ ಅರೇಬಿಯಾದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಬೇಸರದ ಘಟನೆ ವರದಿಯಾಗಿದೆ. ಮೃತರನ್ನು ಕೋಝಿಕ್ಕೋಡ್‌ನ ಪುತಿಯಂಗಡಿಯ ಎಡಕ್ಕಾಡ್ ನಿವಾಸಿ ಮುನ್ನಾ ಸಾಹಿಲ್ (26) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದ ಹಫರ್ ಅಲ್-ಬಾಟಿನ್‌ನಲ್ಲಿರುವ ಆಹಾರ ವಿತರಣಾ ಕಂಪನಿಯೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಮುನ್ನಾ, ಒಂದು ವಾರದ ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಗೋಡೌನ್ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಐದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮುನ್ನಾ ಸಾಹಿಲ್, ಇದೇ ತಿಂಗಳ 26 ರಂದು ನಡೆಯಬೇಕಿದ್ದ ತನ್ನ ಹೊಸ ಮನೆಯ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ನಿಗದಿಯಾಗಿದ್ದ ಮದುವೆಯ ಸಿದ್ಧತೆಗಳಿಗಾಗಿ ಊರಿಗೆ ಮರಳಬೇಕಿತ್ತು. ಆದರೆ ಈ ಸುಂದರ ಕಾಯುವಿಕೆಯ ನಡುವೆಯೇ ಅವರು ಅನಿರೀಕ್ಷಿತವಾಗಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಸೌದಿ ಪೊಲೀಸರು ಅಗತ್ಯ ತನಿಖೆ ಹಾಗೂ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದು, ಇದೀಗ ಶವವನ್ನು ತಾಯ್ನಾಡಿಗೆ ಕಳುಹಿಸಿಕೊಡಲಾಗಿದೆ.
ಇದನ್ನು ಓದಿ : Mangaluru : ಮಸೀದಿಗೆ ಹೋಗಿ ಬರುವುದಾಗಿ ಹೇಳಿ ಹೋದ ಮುಹಮ್ಮದ್ ಅಶ್ರಫ್ ನಿಗೂಢ ನಾಪತ್ತೆ; ಕೊಣಾಜೆ ಠಾಣೆಯಲ್ಲಿ ದೂರು ದಾಖಲು!