ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಅಧಿಕೃತ ನಿವಾಸದ ಮುಂದೆ ನಡೆದ ಪ್ರತಿಭಟನೆಯು ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಕನ್ಸರ್ವೇಟಿವ್ ಇನ್ಫ್ಲುಯೆನ್ಸರ್ ಜೇಕ್ ಲ್ಯಾಂಗ್, ಮೇಯರ್ ಮಮ್ದಾನಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಅವರನ್ನು ಕೂಡಲೇ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರತಿಭಟನೆ ಮತ್ತು ಸ್ಫೋಟದ ಸದ್ದು: ಮಾರ್ಚ್ 7 ರಂದು ಮೇಯರ್ ಅವರ ನಿವಾಸ ‘ಗ್ರೇಸಿ ಮ್ಯಾನ್ಷನ್’ ಮುಂದೆ ಜೇಕ್ ಲ್ಯಾಂಗ್ ನೇತೃತ್ವದಲ್ಲಿ ಇಸ್ಲಾಂ ವಿರೋಧಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಸ್ಫೋಟಕ ಸಾಧನಗಳನ್ನು ಎಸೆಯಲಾಗಿತ್ತು. ಇದನ್ನು ಜೇಕ್ ಲ್ಯಾಂಗ್ ಅವರು “ತಮ್ಮನ್ನು ಕೊಲ್ಲಲು ನಡೆದ ಸಂಚು” ಎಂದು ಕರೆದಿದ್ದಾರೆ. ಈ ಸ್ಫೋಟದ ನಂತರ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಮೇಯರ್ ಮಮ್ದಾನಿ ಅವರ ಖಂಡನೆ: ಈ ಘಟನೆಯ ನಂತರ ಪ್ರತಿಕ್ರಿಯಿಸಿದ ಮೇಯರ್ ಜೊಹ್ರಾನ್ ಮಮ್ದಾನಿ, ಜೇಕ್ ಲ್ಯಾಂಗ್ ನೇತೃತ್ವದ ಈ ಪ್ರತಿಭಟನೆಯನ್ನು “ಬಿಳಿ ವರ್ಣೀಯರ ಶ್ರೇಷ್ಠತೆಯ ದ್ಯೋತಕ” ಮತ್ತು “ದ್ವೇಷ ಭಾಷಣದ ಭಾಗ” ಎಂದು ಕಟುವಾಗಿ ಟೀಕಿಸಿದರು. ಪ್ರತಿಭಟನೆಯ ಹೆಸರಿನಲ್ಲಿ ದ್ವೇಷ ಹರಡುವುದನ್ನು ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜೇಕ್ ಲ್ಯಾಂಗ್ ಅವರ ತೀಕ್ಷ್ಣ ತಿರುಗೇಟು: ಮೇಯರ್ ಅವರ ಹೇಳಿಕೆಯಿಂದ ಕೆಂಡಾಮಂಡಲವಾದ ಜೇಕ್ ಲ್ಯಾಂಗ್, ನನ್ನ ಮೇಲೆ ಹತ್ಯೆ ಯತ್ನ ನಡೆದಿದ್ದರೂ ಮೇಯರ್ ಅವರು ನನ್ನನ್ನೇ ಟೀಕಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಮ್ದಾನಿ ಅವರನ್ನು “ಉಗಾಂಡಾ ಮೂಲದ ಆಕ್ರಮಣಕಾರ” ಎಂದು ಕರೆದ ಅವರು, “ಮಮ್ದಾನಿಯನ್ನು ಗಡೀಪಾರು ಮಾಡಿ – ನ್ಯೂಯಾರ್ಕ್ ಉಳಿಸಿ” (Deport Mamdani – Save NYC) ಎಂಬ ಅಭಿಯಾನವನ್ನು ಘೋಷಿಸಿದ್ದಾರೆ.

