Home ತಾಜಾ ಸುದ್ದಿ Australia Bans Iran Visitors : ಮಧ್ಯಪ್ರಾಚ್ಯದಲ್ಲಿ ಯುದ್ಧದ ಮಧ್ಯೆ ಆಸ್ಟ್ರೇಲಿಯಾ ಇರಾನ್‌ನಿಂದ ಬರುವ ಪ್ರವಾಸಿಗರನ್ನು...

    Australia Bans Iran Visitors : ಮಧ್ಯಪ್ರಾಚ್ಯದಲ್ಲಿ ಯುದ್ಧದ ಮಧ್ಯೆ ಆಸ್ಟ್ರೇಲಿಯಾ ಇರಾನ್‌ನಿಂದ ಬರುವ ಪ್ರವಾಸಿಗರನ್ನು ನಿಷೇಧಿಸಿದೆ

    0
    61
    Australia Bans Iran Visitors : Australia bans tourists from Iran amid war in the Middle East

    ಆಸ್ಟ್ರೇಲಿಯಾ :  ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯಾ ಸರ್ಕಾರವು ಇರಾನ್ ಪ್ರಜೆಗಳು ತನ್ನ ದೇಶಕ್ಕೆ ಭೇಟಿ ನೀಡದಂತೆ ತಾತ್ಕಾಲಿಕ ನಿಷೇಧ ಹೇರಿ ಆದೇಶ ಹೊರಡಿಸಿದೆ. ಇರಾನ್ ಪಾಸ್‌ಪೋರ್ಟ್ ಹೊಂದಿರುವವರು ಆಸ್ಟ್ರೇಲಿಯಾಕ್ಕೆ ಬಂದ ನಂತರ, ಅಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ತಮ್ಮ ವೀಸಾ ಅವಧಿ ಮುಗಿದರೂ ತವರಿಗೆ ಮರಳಲು ನಿರಾಕರಿಸಬಹುದು ಅಥವಾ ಮರಳಲು ಸಾಧ್ಯವಾಗದಿರಬಹುದು ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ “ರಾಷ್ಟ್ರೀಯ ಹಿತಾಸಕ್ತಿ”ಯನ್ನು ಕಾಪಾಡಲು ಈ ಕಠಿಣ ಕ್ರಮ ಅನಿವಾರ್ಯ ಎಂದು ಆಸ್ಟ್ರೇಲಿಯಾದ ಗೃಹ ಸಚಿವಾಲಯ ತಿಳಿಸಿದೆ.

    ಈ ಹೊಸ ನಿಯಮವು ಸದ್ಯಕ್ಕೆ ಆರು ತಿಂಗಳ ಅವಧಿಗೆ ಜಾರಿಯಲ್ಲಿರಲಿದ್ದು, ಪ್ರಸ್ತುತ ಆಸ್ಟ್ರೇಲಿಯಾದ ಹೊರಗಿರುವ ಇರಾನ್ ಪ್ರಜೆಗಳಿಗೆ ಇದು ಅನ್ವಯಿಸುತ್ತದೆ. ಪ್ರವಾಸೋದ್ಯಮ ಅಥವಾ ಕೆಲಸದ ನಿಮಿತ್ತ ಈಗಾಗಲೇ ಆಸ್ಟ್ರೇಲಿಯಾ ಭೇಟಿಗಾಗಿ ವೀಸಾ ಪಡೆದಿದ್ದರೂ ಸಹ, ಈ ಅವಧಿಯಲ್ಲಿ ಅವರು ದೇಶ ಪ್ರವೇಶಿಸುವಂತಿಲ್ಲ. ಸರ್ಕಾರದ ಈ ನಿರ್ಧಾರವು ವಲಸೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮತ್ತು ಸುಸ್ಥಿರವಾಗಿ ಇರಿಸಲು ಸಹಕಾರಿಯಾಗಲಿದೆ ಎಂದು ಆಸ್ಟ್ರೇಲಿಯಾ ಗೃಹ ಸಚಿವ ಟೋನಿ ಬರ್ಕ್ ಸಮರ್ಥಿಸಿಕೊಂಡಿದ್ದಾರೆ.

    ಆದಾಗ್ಯೂ, ಈ ನಿಷೇಧದಿಂದ ಕೆಲವು ವರ್ಗದ ಜನರಿಗೆ ವಿನಾಯಿತಿ ನೀಡಲಾಗಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಇರಾನ್ ಪ್ರಜೆಗಳಿಗೆ ಮತ್ತು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿ ದಾರಿಯಲ್ಲಿರುವವರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಅಲ್ಲದೆ, ಆಸ್ಟ್ರೇಲಿಯಾ ಪ್ರಜೆಗಳ ಸಂಗಾತಿಗಳು (ಪತ್ನಿ/ಪತಿ) ಮತ್ತು ಅವಲಂಬಿತ ಮಕ್ಕಳಿಗೆ ಹಾಗೂ ಕಾಯಂ ವೀಸಾ ಹೊಂದಿರುವವರಿಗೆ ದೇಶ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಆಸ್ಟ್ರೇಲಿಯಾ ಪ್ರಜೆಗಳ ಪೋಷಕರಿಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಪರಿಗಣಿಸಲಿದೆ.

    ಆಸ್ಟ್ರೇಲಿಯಾ ಸರ್ಕಾರದ ಈ ನಡೆಯನ್ನು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ನಿರಾಶ್ರಿತರ ಕೇಂದ್ರಗಳು ತೀವ್ರವಾಗಿ ಟೀಕಿಸಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನವೀಯ ಬಿಕ್ಕಟ್ಟು ಎದುರಾದಾಗ ಮತ್ತು ಜನರು ರಕ್ಷಣೆ ಕೋರಿ ಬರುತ್ತಿರುವಾಗ ಸರ್ಕಾರವು ಬಾಗಿಲು ಮುಚ್ಚುತ್ತಿರುವುದು ಸರಿಯಲ್ಲ ಎಂದು ಪ್ರತಿಭಟಿಸಿವೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಇರಾನ್ ತಂಡದ ಕೆಲವು ಆಟಗಾರ್ತಿಯರು ಅಲ್ಲಿಯೇ ಆಶ್ರಯ ಕೋರಿದ್ದ ಘಟನೆಯ ಬೆನ್ನಲ್ಲೇ ಈ ಕಠಿಣ ಕಾನೂನು ಜಾರಿಗೆ ಬಂದಿರುವುದು ಗಮನಾರ್ಹವಾಗಿದೆ.

    LEAVE A REPLY

    Please enter your comment!
    Please enter your name here

    error: Content is protected !!