Home ತಾಜಾ ಸುದ್ದಿ M Ramprasad Reddy : ಆಂಧ್ರದಲ್ಲಿ 1,000 ಬಸ್‌ಗಳ ತಪಾಸಣೆ, 200 ಕ್ಕೂ ಹೆಚ್ಚು ಬಸ್‌ಗಳಿಗೆ...

    M Ramprasad Reddy : ಆಂಧ್ರದಲ್ಲಿ 1,000 ಬಸ್‌ಗಳ ತಪಾಸಣೆ, 200 ಕ್ಕೂ ಹೆಚ್ಚು ಬಸ್‌ಗಳಿಗೆ ನಿಯಮ ಉಲ್ಲಂಘನೆಗಾಗಿ ದಂಡ: ಸಾರಿಗೆ ಸಚಿವ

    0
    47
    M Ramprasad Reddy: 1,000 buses inspected in Andhra, over 200 buses fined for violating rules: Transport Minister

    ಅಮರಾವತಿ :  ಕಳೆದ ಆರು ತಿಂಗಳ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ನಾಲ್ಕು ಭೀಕರ ಬಸ್ ಅಪಘಾತಗಳಲ್ಲಿ ಒಟ್ಟು 45 ಜನರು ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 33 ಜನರು ಬಸ್ ಬೆಂಕಿಗೆ ಆಹುತಿಯಾಗಿ ಸಜೀವ ದಹನವಾಗಿದ್ದರು. ಈ ಭೀಕರ ಘಟನೆಗಳು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದವು ಮತ್ತು ಖಾಸಗಿ ಬಸ್‌ಗಳ ಸುರಕ್ಷತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿದ್ದವು.

    ಶನಿವಾರ ಅಮರಾವತಿಯಲ್ಲಿ ಮಾಹಿತಿ ನೀಡಿರುವ ಸಾರಿಗೆ ಸಚಿವ ಎಂ. ರಾಮಪ್ರಸಾದ್ ರೆಡ್ಡಿ ಅವರು, ಪ್ರಯಾಣಿಕರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಘೋಷಿಸಿದ್ದಾರೆ. ಅಪಘಾತಗಳನ್ನು ತಡೆಗಟ್ಟಲು ಮತ್ತು ನಿಯಮಬಾಹಿರವಾಗಿ ಸಂಚರಿಸುವ ಬಸ್‌ಗಳಿಗೆ ಬ್ರೇಕ್ ಹಾಕಲು ರಾಜ್ಯದ 16 ಪ್ರಮುಖ ಪಾಯಿಂಟ್‌ಗಳಲ್ಲಿ, ಅಂದರೆ ಟೋಲ್ ಪ್ಲಾಜಾ ಮತ್ತು ಚೆಕ್-ಪೋಸ್ಟ್‌ಗಳಲ್ಲಿ ಸಾರಿಗೆ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಿದ್ದಾರೆ.

    ಈ ಬೃಹತ್ ಕಾರ್ಯಾಚರಣೆಯಡಿಯಲ್ಲಿ ರಾಜ್ಯಾದ್ಯಂತ ಒಟ್ಟು 1,036 ಖಾಸಗಿ ಬಸ್‌ಗಳನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ ಸರಿಯಾದ ದಾಖಲೆಗಳಿಲ್ಲದ ಮತ್ತು ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿದ 236 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ. ಅನೇಕ ಬಸ್‌ಗಳು ಪರವಾನಗಿ ಇಲ್ಲದೆ ಮತ್ತು ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ಓಡಾಟ ನಡೆಸುತ್ತಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

    ಇನ್ನು ಮುಂದೆ ಇಂತಹ ತಪಾಸಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಲಿವೆ ಎಂದು ಸಚಿವರು ಎಚ್ಚರಿಸಿದ್ದಾರೆ. ಕಾನೂನು ಉಲ್ಲಂಘಿಸುವ ಮತ್ತು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುವ ಯಾವುದೇ ಸಾರಿಗೆ ಸಂಸ್ಥೆಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಸಾರ್ವಜನಿಕರು ಮತ್ತು ಬಸ್ ಮಾಲೀಕರು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ಕರೆ ನೀಡಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!