Thursday, April 2, 2026
Homeತಾಜಾ ಸುದ್ದಿIran War : ದುಬೈನಲ್ಲಿ ಕುವೈತ್ ತೈಲ ಟ್ಯಾಂಕರ್ ಮೇಲೆ ಅಟ್ಯಾಕ್! ಮೂವರು ವಿಶ್ವಸಂಸ್ಥೆ...

Iran War : ದುಬೈನಲ್ಲಿ ಕುವೈತ್ ತೈಲ ಟ್ಯಾಂಕರ್ ಮೇಲೆ ಅಟ್ಯಾಕ್! ಮೂವರು ವಿಶ್ವಸಂಸ್ಥೆ ಸೈನಿಕರ ಬಲಿ!

ಟೆಹ್ರಾನ್ :  ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವು ಅತ್ಯಂತ ಭೀಕರ ಹಂತಕ್ಕೆ ತಲುಪಿದ್ದು, ಮಾರ್ಚ್ 31ರ ಇಂದಿನ ಬೆಳವಣಿಗೆಗಳು ಜಗತ್ತನ್ನೇ ಆತಂಕಕ್ಕೆ ತಳ್ಳಿವೆ. ಅಲ್ ಜಝೀರಾ ವರದಿಯ ಪ್ರಕಾರ, ದುಬೈ ಬಂದರಿನಲ್ಲಿದ್ದ ಕುವೈತ್‌ನ ದೈತ್ಯ ತೈಲ ಟ್ಯಾಂಕರ್ ‘ಅಲ್-ಸಲ್ಮಿ’ (Al-Salmi) ಮೇಲೆ ಇರಾನ್ ಬೆಂಬಲಿತ ಪಡೆಗಳು ದಾಳಿ ನಡೆಸಿವೆ. ಈ ಭೀಕರ ದಾಳಿಯಿಂದಾಗಿ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಂದು ಹಂತದಲ್ಲಿ ತೈಲ ಸೋರಿಕೆಯಾಗಿ ಸಮುದ್ರಕ್ಕೆ ಭಾರಿ ಹಾನಿಯಾಗುವ ಭೀತಿ ಎದುರಾಗಿತ್ತು. ಸದ್ಯ ದುಬೈ ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಿಸಿದ್ದು, ಪರಿಸ್ಥಿತಿ ನಿಗಾದಲ್ಲಿದೆ.

ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಲೆಬನಾನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಸಂಘರ್ಷದ ವೇಳೆ ವಿಶ್ವಸಂಸ್ಥೆಯ ಮೂವರು ಶಾಂತಿಪಾಲನಾ ಸೈನಿಕರು (UN Peacekeepers) ಮೃತಪಟ್ಟಿದ್ದಾರೆ. ಮೃತ ಸೈನಿಕರು ಇಂಡೋನೇಷ್ಯಾ ಮೂಲದವರಾಗಿದ್ದು, ದಕ್ಷಿಣ ಲೆಬನಾನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯನ್ನು ಅಂತರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿದ್ದು, ಫ್ರಾನ್ಸ್ ಸರ್ಕಾರವು ಈ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಗೆ ಕರೆ ನೀಡಿದೆ.

ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ಪಡೆಗಳು ಸತತವಾಗಿ ಬಾಂಬ್ ಮಳೆಗರೆಯುತ್ತಿವೆ. ಟೆಹ್ರಾನ್‌ನ ಹೃದಯಭಾಗದಲ್ಲಿರುವ ಸರ್ಕಾರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸಿದ ಈ ವೈಮಾನಿಕ ದಾಳಿಯಿಂದಾಗಿ ಇಡೀ ನಗರದಲ್ಲಿ ಸತತ ಎರಡನೇ ದಿನವೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇರಾನ್‌ನ ಮಹಲ್ಲತ್ ನಗರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಹಲವಾರು ವಸತಿ ಸಂಕೀರ್ಣಗಳು ಧ್ವಂಸವಾಗಿವೆ ಎಂದು ವರದಿಯಾಗಿದೆ.

ದಕ್ಷಿಣ ಲೆಬನಾನ್‌ನ ಭೂಪ್ರದೇಶದಲ್ಲಿ ಹಿಜ್ಬುಲ್ಲಾ ಉಗ್ರರೊಂದಿಗೆ ನಡೆದ ಮುಖಾಮುಖಿ ಹೋರಾಟದಲ್ಲಿ ಇಸ್ರೇಲ್ ಸೇನೆಗೂ ಹಿನ್ನಡೆಯಾಗಿದ್ದು, ನಾಲ್ವರು ಇಸ್ರೇಲಿ ಸೈನಿಕರು ಮೃತಪಟ್ಟಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳ ಪ್ರಕಾರ, ಲೆಬನಾನ್ ಆಕ್ರಮಣ ಆರಂಭವಾದಾಗಿನಿಂದ ಇದುವರೆಗೆ ಒಟ್ಟು 10 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ತೀವ್ರತೆಯಿಂದಾಗಿ ಜಾಗತಿಕ ಮಾರುಕಟ್ಟೆಗಳು ಕುಸಿತ ಕಾಣುತ್ತಿದ್ದು, ದಕ್ಷಿಣ ಕೊರಿಯಾದ ಕರೆನ್ಸಿ ‘ವಾನ್’ ಕಳೆದ 17 ವರ್ಷಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!