Thursday, April 2, 2026
Homeತಾಜಾ ಸುದ್ದಿOrissa High Court : ವಾಹನಗಳಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಮಹಿಳೆ!

Orissa High Court : ವಾಹನಗಳಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಮಹಿಳೆ!

ಕಟಕ್ : ಒಡಿಶಾದ ಕಟಕ್‌ನಲ್ಲಿರುವ ಹೈಕೋರ್ಟ್ ಆವರಣದ ಬಳಿ ಮಹಿಳೆಯೊಬ್ಬಳು ಸಿನೆಮಾ ಸ್ಟೈಲ್‌ನಲ್ಲಿ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ ಹೈಕೋರ್ಟ್‌ನ ಮುಖ್ಯ ದ್ವಾರದ ಬಳಿ ಈ ಘಟನೆ ಸಂಭವಿಸಿದ್ದು, ಜಗತ್‌ಸಿಂಗ್‌ಪುರ ಜಿಲ್ಲೆಯ ಮಿನತಿ ಸಾಹು ಎಂಬ ಮಹಿಳೆ ಪೆಟ್ರೋಲ್ ಬಾಟಲಿಯೊಂದಿಗೆ ಬಂದು ಅಲ್ಲಿ ನಿಲ್ಲಿಸಿದ್ದ ಮಹೀಂದ್ರಾ ಸ್ಕಾರ್ಪಿಯೋ ಕಾರಿಗೆ ಬೆಂಕಿ ಹಚ್ಚಿದ್ದಾಳೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಪಕ್ಕದಲ್ಲಿದ್ದ ಎರಡು ಸ್ಕೂಟರ್‌ಗಳು ಮತ್ತು ಒಂದು ಎಲೆಕ್ಟ್ರಿಕ್ ಬೈಕ್‌ಗೂ ಹಬ್ಬಿ ದಟ್ಟ ಹೊಗೆ ಆವರಿಸಿದೆ.

ಈ ಕೃತ್ಯದ ಹಿಂದಿನ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಬಂಧಿತ ಮಹಿಳೆಯನ್ನು ವಿಚಾರಣೆ ನಡೆಸಿದಾಗ, “ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಬೇಕಿತ್ತು, ಅವರನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ ಈ ರೀತಿ ಮಾಡಿದೆ” ಎಂದು ಹೇಳಿಕೆ ನೀಡಿದ್ದಾಳೆ. ಹಳೆಯ ಬಟ್ಟೆಗಳನ್ನು ಪೆಟ್ರೋಲ್‌ನಲ್ಲಿ ಅದ್ದಿ ತಂದಿದ್ದ ಆಕೆ, ಅಲ್ಲಿನ ಯುವಕನೊಬ್ಬನಿಗೆ ತನ್ನ ಕೃತ್ಯವನ್ನು ವಿಡಿಯೋ ಮಾಡಲು ಹೇಳಿ ನಂತರ ಬೆಂಕಿ ಹಚ್ಚಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥರಾಗಿರುವಂತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಂತ ಸುಸಜ್ಜಿತ ಭದ್ರತೆ ಇರುವ ಹೈಕೋರ್ಟ್ ಆವರಣದ ಬಳಿಯೇ ಇಂತಹ ಘಟನೆ ನಡೆದಿರುವುದು ಭದ್ರತಾ ಲೋಪದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಅದೃಷ್ಟವಶಾತ್ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸದ್ಯ ಆರೋಪಿ ಮಹಿಳೆ ಪೊಲೀಸ್ ವಶದಲ್ಲಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!