ಇಸ್ರೇಲ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿದ್ದಾರೆ. “ಇರಾನ್ ಇನ್ನು ಮುಂದೆ ಅಮೆರಿಕ, ಇಸ್ರೇಲ್ ಮತ್ತು ಇಡೀ ವಿಶ್ವಕ್ಕೆ ಪರಮಾಣು ಹಾಗೂ ಭಯೋತ್ಪಾದನೆಯ ಬೆದರಿಕೆಯಾಗಿ ಉಳಿಯಬಾರದು ಎಂಬ ಟ್ರಂಪ್ ಪ್ರಯತ್ನಗಳಿಗೆ ನಮ್ಮ ಬೆಂಬಲವಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಈ ಶಾಂತಿ ಒಪ್ಪಂದವು ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಗುಂಪಿಗೆ ಅನ್ವಯಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕದನ ವಿರಾಮವು ಲೆಬನಾನ್ ಒಳಗೊಂಡಂತೆ ಎಲ್ಲೆಡೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದರು. ಆದರೆ ನೆತನ್ಯಾಹು ಈ ಹೇಳಿಕೆಯನ್ನು ತಳ್ಳಿಹಾಕಿದ್ದು, “ಲೆಬನಾನ್ ಈ ಕದನ ವಿರಾಮದ ಭಾಗವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಪಡೆಗಳು ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವುದರಿಂದ, ಅವರ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ.
ಈಗಾಗಲೇ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಯಿಂದಾಗಿ 1,500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇರಾನ್ ಜೊತೆಗಿನ 15 ದಿನಗಳ ಈ ‘ಕೂಲ್‌ಡೌನ್ ವಿಂಡೋ’ ಸಮಯದಲ್ಲಿ ಲೆಬನಾನ್ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಈಗ ಕುತೂಹಲ ಮೂಡಿಸಿದೆ.

