Home ತಾಜಾ ಸುದ್ದಿ North Korea Weapons Test : ವಿಶ್ವದ ಗಮನ ಇರಾನ್ ಮೇಲಿರುವಾಗಲೇ ಉತ್ತರ ಕೊರಿಯಾದಿಂದ ಭೀಕರ...

    North Korea Weapons Test : ವಿಶ್ವದ ಗಮನ ಇರಾನ್ ಮೇಲಿರುವಾಗಲೇ ಉತ್ತರ ಕೊರಿಯಾದಿಂದ ಭೀಕರ ಶಸ್ತ್ರಾಸ್ತ್ರ ಪರೀಕ್ಷೆ

    0
    62
    North Korea Weapons Test: A terrifying weapons test from North Korea while the world's attention is on Iran

    ಪ್ಯೊಂಗ್ಯಾಂಗ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿರೋಧಿ ರಾಷ್ಟ್ರಗಳ ಮೇಲೆ ಸರಣಿ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಉತ್ತರ ಕೊರಿಯಾ ಈ ವಾರ ವಿದ್ಯುತ್ಕಾಂತೀಯ ಆಯುಧ ವ್ಯವಸ್ಥೆ ಮತ್ತು ವಿಮಾನ ವಿರೋಧಿ ಕ್ಷಿಪಣಿ ಸೇರಿದಂತೆ ಹಲವು ಹೊಸ ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ನಡೆಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಮೇಲೆ ಜಗತ್ತು ಗಮನ ಹರಿಸಿರುವ ಸಮಯವನ್ನೇ ಬಳಸಿಕೊಂಡಿರುವ ಪ್ಯೋಂಗ್ಯಾಂಗ್, ತನ್ನ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನವನ್ನು ಚುರುಕುಗೊಳಿಸಿದೆ. ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಕೆಸಿಎನ್‌ಎ (KCNA) ವರದಿ ಮಾಡಿರುವಂತೆ, ಜನರಲ್ ಕಿಮ್ ಜೊಂಗ್ ಸಿಕ್ ಅವರು ಸೋಮವಾರದಿಂದ ಬುಧವಾರದವರೆಗೆ ನಡೆದ ಈ ಮೂರು ದಿನಗಳ ಪರೀಕ್ಷೆಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಕಿಮ್, “ವಿದ್ಯುತ್ಕಾಂತೀಯ ಆಯುಧ ಮತ್ತು ಕಾರ್ಬನ್ ಫೈಬರ್ ಬಾಂಬ್‌ಗಳು ವಿವಿಧ ಮಿಲಿಟರಿ ರಂಗಗಳಲ್ಲಿ ಬಳಸಬಹುದಾದ ಆಯಕಟ್ಟಿನ ಆಸ್ತಿಗಳಾಗಿವೆ” ಎಂದು ತಿಳಿಸಿದ್ದಾರೆ. ಈ ರೀತಿಯ ಆಯುಧಗಳು ಸ್ಫೋಟಕಗಳಿಗಿಂತ ಹೆಚ್ಚಾಗಿ ವಿದ್ಯುತ್ಕಾಂತೀಯ ಶಕ್ತಿಯನ್ನು ಬಳಸಿ ಶತ್ರುಗಳ ಎಲೆಕ್ಟ್ರಾನಿಕ್ಸ್ ಮೂಲಸೌಕರ್ಯವನ್ನು ಧ್ವಂಸಗೊಳಿಸುತ್ತವೆ. ಇದರೊಂದಿಗೆ ಮೊಬೈಲ್ ಶಾರ್ಟ್-ರೇಂಜ್ ಆಂಟಿ-ಏರ್‌ಕ್ರಾಫ್ಟ್ ಮಿಸೈಲ್ ಮತ್ತು ಕ್ಲಸ್ಟರ್ ಬಾಂಬ್ ಹೊಂದಿರುವ ಟ್ಯಾಕ್ಟಿಕಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಕ್ಷತೆಯನ್ನು ಪರೀಕ್ಷಿಸಲಾಯಿತು. ಈ ಕ್ಲಸ್ಟರ್ ಬಾಂಬ್ ಯುದ್ಧತಂತ್ರದ ಕ್ಷಿಪಣಿಗಳು ಸುಮಾರು 6.5 ರಿಂದ 7 ಹೆಕ್ಟೇರ್ ಪ್ರದೇಶವನ್ನು ಬೂದಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ವರದಿ ಹೇಳಿದೆ.

    ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಅಮೆರಿಕದ ಮಿಲಿಟರಿ ಸಂಪನ್ಮೂಲಗಳು ಏಷ್ಯಾದಿಂದ ದೂರ ಸರಿಯುತ್ತಿರುವ ಬೆನ್ನಲ್ಲೇ ಈ ಪರೀಕ್ಷೆಗಳು ನಡೆದಿವೆ. ಈ ಮಧ್ಯೆ, ಉತ್ತರ ಕೊರಿಯಾ ರಷ್ಯಾ ಮತ್ತು ಚೀನಾದೊಂದಿಗೆ ತನ್ನ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಆರು ವರ್ಷಗಳ ನಂತರ ಗುರುವಾರ ಉತ್ತರ ಕೊರಿಯಾಕ್ಕೆ ಭೇಟಿ ನೀಡುತ್ತಿರುವುದು ಜಾಗತಿಕ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಕ್ಕೆ ಸಾವಿರಾರು ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸುವ ಮೂಲಕ ಕಿಮ್ ಜೊಂಗ್ ಉನ್ ಮಾಸ್ಕೋದ ಪ್ರಬಲ ಮಿತ್ರನಾಗಿ ಹೊರಹೊಮ್ಮಿದ್ದಾರೆ. ರಷ್ಯಾ ಯುದ್ಧಭೂಮಿಯಲ್ಲಿ ಕಂಡುಕೊಂಡ ಅನುಭವಗಳನ್ನು ಬಳಸಿಕೊಂಡು ಉತ್ತರ ಕೊರಿಯಾ ತನ್ನ ಕ್ಷಿಪಣಿ ತಂತ್ರಜ್ಞಾನವನ್ನು ಸುಧಾರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ರಷ್ಯಾ ಉಕ್ರೇನ್ ವಿರುದ್ಧ ಬಳಸಿದ್ದ ‘ಹವಾಸೊಂಗ್-11’ (Hwasong-11) ಕ್ಷಿಪಣಿಗಳ ಸುಧಾರಿತ ಆವೃತ್ತಿಯನ್ನು ಅಭಿವೃದ್ಧಿಪಡಿಸುವತ್ತ ಕಿಮ್ ಗಮನ ಹರಿಸಿದ್ದಾರೆ.

    ಮತ್ತೊಂದೆಡೆ, ಉತ್ತರ ಕೊರಿಯಾದ ಈ ಬೆಳವಣಿಗೆಗಳ ಬಗ್ಗೆ ದಕ್ಷಿಣ ಕೊರಿಯಾ ಎಚ್ಚರಿಕೆ ವಹಿಸಿದೆ. “ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ರಕ್ಷಣಾ ಪಡೆಯು ಉತ್ತರ ಕೊರಿಯಾದ ಯಾವುದೇ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ” ಎಂದು ದಕ್ಷಿಣ ಕೊರಿಯಾದ ಜೆಸಿಎಸ್ ವಕ್ತಾರ ಜಾಂಗ್ ದೋ-ಯಂಗ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕಿಮ್ ಜೊಂಗ್ ಉನ್ ಅವರು ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರ ಬಗ್ಗೆ ಅಪರೂಪದ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆದರೆ, ಬೆನ್ನಲ್ಲೇ ನಡೆಸಿದ ಈ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳು ಆ ಸೌಹಾರ್ದತೆಯ ಮಾತುಗಳು ಕೇವಲ ಎಚ್ಚರಿಕೆಯ ಭಾಗವಾಗಿದ್ದವು ಎಂಬುದನ್ನು ಸಾಬೀತುಪಡಿಸಿವೆ. ಮುಂದಿನ ತಿಂಗಳು ಡೊನಾಲ್ಡ್ ಟ್ರಂಪ್ ಅವರು ಚೀನಾಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಟ್ರಂಪ್ ಮತ್ತು ಕಿಮ್ ಜೊಂಗ್ ಉನ್ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಬಹುದೇ ಎಂಬ ಚರ್ಚೆಗಳು ಈಗಿನಿಂದಲೇ ಶುರುವಾಗಿವೆ.

    LEAVE A REPLY

    Please enter your comment!
    Please enter your name here

    error: Content is protected !!