ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಿದ್ದು, ಭಾರಿ ದೊಡ್ಡ ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದೆ. ಒಟ್ಟು 60 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಈ ಪೈಕಿ ಸುಮಾರು 32 ಲಕ್ಷ ಮತದಾರರು ಅರ್ಹರಾಗಿದ್ದಾರೆ ಮತ್ತು ಬರೋಬ್ಬರಿ 27 ಲಕ್ಷ ಮತದಾರರನ್ನು ಅನರ್ಹರೆಂದು ಗುರುತಿಸಿ ಪಟ್ಟಿಯಿಂದ ಕಡಿತಗೊಳಿಸಲಾಗಿದೆ. ಈ ಮಹತ್ವದ ಬದಲಾವಣೆಯು ಮುಂಬರುವ ಏಪ್ರಿಲ್ 23 ಮತ್ತು 29 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಯಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕಡಿತ?:
- ಮುರ್ಷಿದಾಬಾದ್: ಮುಸ್ಲಿಂ ಬಹುಸಂಖ್ಯಾತರಿರುವ ಮತ್ತು ತೃಣಮೂಲ ಕಾಂಗ್ರೆಸ್ (TMC) ಭದ್ರಕೋಟೆಯಾಗಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಸುಮಾರು 4.55 ಲಕ್ಷ ಹೆಸರುಗಳನ್ನು ಕಡಿತಗೊಳಿಸಲಾಗಿದೆ. ಇದು ಟಿಎಂಸಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
- ಉತ್ತರ 24 ಪರಗಣ: ಇಲ್ಲಿ ಸುಮಾರು 3.25 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಈ ಭಾಗದಲ್ಲಿ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳ ಮತದಾರರಿದ್ದಾರೆ.
- ಇತರ ಜಿಲ್ಲೆಗಳು: ಮಾಲ್ಡಾ, ನಾಡಿಯಾ, ದಕ್ಷಿಣ 24 ಪರಗಣ, ಬೀರ್‌ಭೂಮ್, ಹೂಗ್ಲಿ ಮತ್ತು ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ್ಲೂ ಗಣನೀಯ ಸಂಖ್ಯೆಯ ಮತದಾರರ ಹೆಸರುಗಳು ಡಿಲೀಟ್ ಆಗಿವೆ.
- ಕಡಿಮೆ ಕಡಿತ: ಬುಡಕಟ್ಟು ಬಹುಸಂಖ್ಯಾತ ಪ್ರದೇಶಗಳಾದ ಪುರುಲಿಯಾ ಮತ್ತು ಝಾರ್ಗ್ರಾಮ್ ಬೆಲ್ಟ್‌ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಹೆಸರುಗಳನ್ನು ಕಡಿತಗೊಳಿಸಲಾಗಿದೆ.
ರಾಜಕೀಯ ಲೆಕ್ಕಾಚಾರ: ಮತದಾರರ ಪಟ್ಟಿಯ ಈ ‘ಶೇಕ್-ಅಪ್’ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಟಿಎಂಸಿಯ ಭದ್ರಕೋಟೆಯಾದ ಮುಸ್ಲಿಂ ಮತದಾರರ ಪ್ರದೇಶಗಳಲ್ಲಿ ಹೆಸರುಗಳು ಕಡಿತಗೊಂಡಿದ್ದರೆ, ಇತ್ತ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ಮತುವಾ (Matua) ಸಮುದಾಯದ ಪ್ರಭಾವವಿರುವ ನಾಡಿಯಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲೂ ಮತದಾರರ ಹೆಸರುಗಳು ಕಡಿಮೆಯಾಗಿವೆ. ಹೀಗಾಗಿ, ಈ ಬದಲಾವಣೆಯು ಎರಡೂ ಪಕ್ಷಗಳಿಗೂ ಸಮಾನವಾಗಿ ಪೆಟ್ಟು ನೀಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4 ರಂದು ಪ್ರಕಟವಾಗಲಿದೆ.

