Home ತಾಜಾ ಸುದ್ದಿ Israeli attack Gaza : ಗಾಜಾದಲ್ಲಿ ಇಸ್ರೇಲ್ ನಡೆಸಿದ ಭೀಕರ ದಾಳಿ: ಕನಿಷ್ಠ ಏಳು ಫೆಲೆಸ್ತೀನಿಗಳ...

    Israeli attack Gaza : ಗಾಜಾದಲ್ಲಿ ಇಸ್ರೇಲ್ ನಡೆಸಿದ ಭೀಕರ ದಾಳಿ: ಕನಿಷ್ಠ ಏಳು ಫೆಲೆಸ್ತೀನಿಗಳ ಸಾವು; ಕದನ ವಿರಾಮದ ನಡುವೆಯೂ ಮುಂದುವರಿದ ರಕ್ತಪಾತ!

    0
    43
    Israeli attack Gaza: Fierce Israeli attack in Gaza: At least seven Palestinians killed; Bloodshed continues despite ceasefire!

    ಗಾಜಾ : ಅಂತರಾಷ್ಟ್ರೀಯ ಮಟ್ಟದಲ್ಲಿ ಕದನ ವಿರಾಮ ಮತ್ತು ಶಾಂತಿ ಮಾತುಕತೆಗಳ ಪ್ರಕ್ರಿಯೆ ಚುರುಕುಗೊಂಡಿದ್ದರೂ, ಗಾಜಾಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಮಾರಣಾಂತಿಕ ದಾಳಿಗಳಿಗೆ ಬ್ರೇಕ್ ಬಿದ್ದಿಲ್ಲ. ಶನಿವಾರ ಮುಂಜಾನೆ ಇಸ್ರೇಲ್ ಪಡೆಗಳು ಕೇಂದ್ರ ಮತ್ತು ದಕ್ಷಿಣ ಗಾಜಾದ ಮೇಲೆ ನಡೆಸಿದ ಸರಣಿ ವಾಯುದಾಳಿಗಳಲ್ಲಿ ಕನಿಷ್ಠ ಏಳು ಮಂದಿ ಫೆಲೆಸ್ತೀನಿಗಳು ಬಲಿಯಾಗಿದ್ದಾರೆ. ಕೇಂದ್ರ ಗಾಜಾದ ಬುರೇಜ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ನ ಡ್ರೋನ್ ಎರಡು ಕ್ಷಿಪಣಿಗಳನ್ನು ಹಾರಿಸಿದ್ದು, ಅಲ್ಲಿನ ‘ಬ್ಲಾಕ್ 9’ ಪ್ರದೇಶದಲ್ಲಿದ್ದ ನಾಗರಿಕರ ಗುಂಪಿನ ಮೇಲೆ ಈ ದಾಳಿ ನಡೆದಿದೆ. ಈ ಭೀಕರ ಸ್ಫೋಟದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಅಲ್-ಅಕ್ಸಾ ಮತ್ತು ಅಲ್-ಅವ್ದಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

    ದಕ್ಷಿಣ ಗಾಜಾದ ಖಾನ್ ಯೂನಿಸ್ ಪಕ್ಕದ ಬನಿ ಸುಹೈಲಾ ಎಂಬಲ್ಲಿಯೂ ಇಸ್ರೇಲ್‌ನ ಕ್ರೌರ್ಯ ಮುಂದುವರಿದಿದ್ದು, ನಿರಾಶ್ರಿತರು ಆಶ್ರಯ ಪಡೆದಿದ್ದ ಗುಡಾರವೊಂದರ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಗಾಜಾ ನಗರದ ಪೂರ್ವ ಭಾಗಗಳಲ್ಲಿ ಇಸ್ರೇಲ್ ಟ್ಯಾಂಕ್‌ಗಳು ಮತ್ತು ಫಿರಂಗಿಗಳು ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ. ಕದನ ವಿರಾಮ ಘೋಷಣೆಯಾದ ನಂತರವೂ ಕಳೆದ ಕೆಲವೇ ದಿನಗಳಲ್ಲಿ 30ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಇಸ್ರೇಲ್‌ನ ಈ “ಅನಿರ್ಬಂಧಿತ ಹತ್ಯೆಗಳ ಸರಣಿ”ಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ತೀವ್ರವಾಗಿ ಖಂಡಿಸಿದ್ದಾರೆ.

    ಇತ್ತ ಗಾಜಾದಲ್ಲಿ ಬಾಂಬ್ ಮಳೆ ಸುರಿಯುತ್ತಿದ್ದರೆ, ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲ್ ಪಡೆಗಳು ಮತ್ತು ವಸಾಹತುದಾರರು ಫೆಲೆಸ್ತೀನಿಗಳ ಗ್ರಾಮಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ. ಕಲ್ಕಿಲ್ಯ ಮತ್ತು ಜೆನಿನ್ ಪ್ರದೇಶಗಳಲ್ಲಿ ಅಕ್ರಮವಾಗಿ ಮನೆಗಳಿಗೆ ನುಗ್ಗಿದ ಪಡೆಗಳು ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿವೆ. ನಾಬ್ಲಸ್ ಪ್ರಾಂತ್ಯದ ಡುಮಾ ಗ್ರಾಮದಲ್ಲಿ ವಸಾಹತುದಾರರು ಮನೆಗೆ ಬೆಂಕಿ ಹಚ್ಚುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ. ಇಸ್ರೇಲ್ ಸರ್ಕಾರವು ವೆಸ್ಟ್ ಬ್ಯಾಂಕ್‌ನಲ್ಲಿ ರಹಸ್ಯವಾಗಿ 34 ಹೊಸ ಅಕ್ರಮ ವಸಾಹತುಗಳಿಗೆ ಅನುಮೋದನೆ ನೀಡಿದೆ ಎಂದು ವರದಿಯಾಗಿದ್ದು, ಇದನ್ನು ಟರ್ಕಿ, ಸ್ವೀಡನ್ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವು ದೇಶಗಳು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಬಣ್ಣಿಸಿವೆ.

    LEAVE A REPLY

    Please enter your comment!
    Please enter your name here

    error: Content is protected !!