Home ತಾಜಾ ಸುದ್ದಿ Donald Trump : ಅಮೆರಿಕ-ಇರಾನ್ ಸಂಘರ್ಷ ಅಂತ್ಯದ ಹಂತದಲ್ಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳುತ್ತಾರೆ; ‘ನಾವು...

    Donald Trump : ಅಮೆರಿಕ-ಇರಾನ್ ಸಂಘರ್ಷ ಅಂತ್ಯದ ಹಂತದಲ್ಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳುತ್ತಾರೆ; ‘ನಾವು ಇನ್ನೂ ಮುಗಿದಿಲ್ಲ’ ಎಂದು ಎಚ್ಚರಿಸಿದ್ದಾರೆ

    0
    49

    ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಇರಾನ್ ಜೊತೆಗಿನ ಸಂಘರ್ಷವು “ಅಂತ್ಯದ ಹಂತಕ್ಕೆ ಅತ್ಯಂತ ಸಮೀಪದಲ್ಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


    ಟ್ರಂಪ್ ಹೇಳಿದ್ದೇನು?:
    ‘ಫಾಕ್ಸ್ ಬ್ಯುಸಿನೆಸ್’ (FOX Business) ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, “ನನ್ನ ಪ್ರಕಾರ ಈ ಸಂಘರ್ಷ ಮುಕ್ತಾಯವಾಗುವ ಕಾಲ ಹತ್ತಿರದಲ್ಲಿದೆ. ಹೌದು, ಇದು ಬಹಳ ಬೇಗನೆ ಮುಗಿಯಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಗಳು ದಿಗ್ಬಂಧನ ಮುಂದುವರಿಸಿರುವ ನಡುವೆಯೇ ಟ್ರಂಪ್ ಅವರ ಈ ಮಾತುಗಳು ಹೊರಬಂದಿರುವುದು ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ.

    ದಿಗ್ಬಂಧನ ಮತ್ತು ಸಂಧಾನ: ಇರಾನ್ ಬಂದರುಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸಾವಿರಾರು ಸೈನಿಕರು ಮತ್ತು ಯುದ್ಧನೌಕೆಗಳ ಮೂಲಕ ನೌಕಾ ದಿಗ್ಬಂಧನವನ್ನು ಮುಂದುವರಿಸಿದೆ. ಈ ದಿಗ್ಬಂಧನದಿಂದಾಗಿ ಈಗಾಗಲೇ ಹಲವು ನೌಕೆಗಳು ಇರಾನ್ ತಲುಪಲಾಗದೆ ಹಿಂತಿರುಗಿವೆ. ಇಸ್ಲಾಮಾಬಾದ್‌ನಲ್ಲಿ ನಡೆದಿದ್ದ ಮೊದಲ ಸುತ್ತಿನ ಶಾಂತಿ ಮಾತುಕತೆ ವಿಫಲವಾದ ನಂತರ, ಈಗ ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಹೇಳಿಕೆಯು ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

    ನಾವು ಇನ್ನು ಮುಗಿಸಿಲ್ಲ: ಸಂಘರ್ಷ ಅಂತ್ಯವಾಗುವ ಭರವಸೆ ನೀಡಿದರೂ, ಅಮೆರಿಕದ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. “ಒಂದು ವೇಳೆ ನಾನು ಈಗಲೇ ಕಾರ್ಯಾಚರಣೆ ನಿಲ್ಲಿಸಿದರೆ, ಆ ದೇಶ (ಇರಾನ್) ಮತ್ತೆ ಚೇತರಿಸಿಕೊಳ್ಳಲು ಅವರಿಗೆ 20 ವರ್ಷ ಬೇಕಾಗಬಹುದು. ನಾವು ಇನ್ನು ಕೆಲಸ ಮುಗಿಸಿಲ್ಲ, ಏನಾಗುತ್ತದೆ ಎಂದು ಕಾದು ನೋಡೋಣ. ಆದರೆ ಅವರು (ಇರಾನ್) ಅತಿ ಶೀಘ್ರವಾಗಿ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ನನಗನ್ನಿಸುತ್ತದೆ” ಎಂದು ಟ್ರಂಪ್ ಗುಡುಗಿದ್ದಾರೆ.

    ಸದ್ಯ ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಒತ್ತಡ ಮತ್ತು ರಾಜತಾಂತ್ರಿಕ ಮಾತುಕತೆಗಳು ಏಕಕಾಲದಲ್ಲಿ ನಡೆಯುತ್ತಿದ್ದು, ಮುಂದಿನ ಕೆಲವು ದಿನಗಳು ಅಂತರಾಷ್ಟ್ರೀಯ ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ.

    LEAVE A REPLY

    Please enter your comment!
    Please enter your name here

    error: Content is protected !!