ನಾಸಿಕ್ (ಏ.17): ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಎಂಟನೇ ಆರೋಪಿಯಾಗಿರುವ 26 ವರ್ಷದ ನಿದಾ ಖಾನ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿರುವ ಬೆನ್ನಲ್ಲೇ, ಅವರ ಕುಟುಂಬಸ್ಥರು ಆಘಾತಕಾರಿ ಮಾಹಿತಿ ನೀಡಿದ್ದಾರೆ.
ನಿದಾ ಖಾನ್ ತಲೆಮರೆಸಿಕೊಂಡಿಲ್ಲ!: ನಿದಾ ಖಾನ್ ಮುಂಬೈನಲ್ಲಿದ್ದು, ಅವರು ಗರ್ಭಿಣಿಯಾಗಿದ್ದಾರೆ. ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ಅವರು ಎಲ್ಲೂ ಓಡಿಹೋಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇಷ್ಟು ದಿನ ಹರಿದಾಡುತ್ತಿದ್ದ ಸುದ್ದಿಗಳಂತೆ ಆಕೆ ಬಿಪಿಒನ ‘ಹೆಚ್‌ಆರ್ ಹೆಡ್’ ಆಗಿರಲಿಲ್ಲ, ಬದಲಿಗೆ 2021ರಲ್ಲಿ ಟೆಲಿ-ಕಾಲರ್ ಆಗಿ ಸೇಲ್ಸ್ ತಂಡಕ್ಕೆ ಸೇರಿದ್ದರು ಎಂದು ಅವರ ಸಹೋದರ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಕೆಯ ಫೋಟೋವನ್ನು ಆಕೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಕದ್ದು, ಅದಕ್ಕೆ ಹುದ್ದೆಯ ಹೆಸರನ್ನು ಡಿಜಿಟಲ್ ಆಗಿ ಎಡಿಟ್ ಮಾಡಿ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತಂದೆಯ ಆಕ್ರೋಶ ಮತ್ತು ನೋವು: ಹಿಂದುಸ್ತಾನ್ ಟೈಮ್ಸ್ ವರದಿ ಉಲ್ಲೇಖಿಸಿ ಮಾತನಾಡಿದ ನಿದಾ ಅವರ ತಂದೆ, “ನನ್ನ ಮಗಳು ಟಿಸಿಎಸ್‌ನಂತಹ ದೊಡ್ಡ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದಕ್ಕೆ ನಾನು ಮೊದಲು ಹೆಮ್ಮೆಪಡುತ್ತಿದ್ದೆ. ಆದರೆ ಈಗ ಆಕೆಯನ್ನು ಕೆಲಸಕ್ಕೆ ಕಳುಹಿಸಿದ್ದಕ್ಕೆ ವಿಷಾದಿಸುತ್ತಿದ್ದೇನೆ. ಆಕೆಯ ಬಗ್ಗೆ ಹರಿದಾಡುತ್ತಿರುವ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ. ಈ ಸುದ್ದಿಗಳಿಂದ ನಮ್ಮ ಕುಟುಂಬ ಮಾನಸಿಕವಾಗಿ ಕುಗ್ಗಿದೆ ಮತ್ತು ಆಕೆಯ ತಾಯಿ ಅಸ್ವಸ್ಥರಾಗಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಟಿಸಿಎಸ್‌ನ ನಾಸಿಕ್ ಬಿಪಿಒ ಘಟಕದಲ್ಲಿ ಸಹೋದ್ಯೋಗಿಗಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಧಾರ್ಮಿಕವಾಗಿ ಬಲವಂತದ ಕಿರುಕುಳ ನೀಡಿದ ಆರೋಪದ ಮೇಲೆ 8 ಮಂದಿ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ನಿದಾ ಖಾನ್ ಮಾತ್ರ ಬಂಧನಕ್ಕೆ ಬಾಕಿ ಇದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಈ ಎಲ್ಲ ಆರೋಪಗಳು ಸುಳ್ಳು ಎಂದು ನಿದಾ ಕುಟುಂಬಸ್ಥರು ವಾದಿಸುತ್ತಿದ್ದಾರೆ.
ಇದನ್ನು ಓದಿ : Mangaluru | ದೇರಳಕಟ್ಟೆ: ಡಯಾಲಿಸಿಸ್ ರೋಗಿಯಿದ್ದ ಆಟೋ ತಡೆದು ಪೊಲೀಸರಿಂದ ಕಿರುಕುಳ!

