ಕೊಯಮತ್ತೂರು/ಮಲಪ್ಪುರಂ: ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಇವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಸರ್ಕಾರಿ ಶಾಲೆಯ ಆರು ಮಂದಿ ಶಿಕ್ಷಕರು ಮತ್ತು ಒಬ್ಬ ಶಾಲಾ ಸಿಬ್ಬಂದಿ ಸೇರಿದ್ದಾರೆ. ಶುಕ್ರವಾರ ಸಂಜೆ 13ನೇ ಹೇರ್‌ಪಿನ್ ಬೆಂಡ್ ಬಳಿ ಈ ದುರ್ಘಟನೆ ನಡೆದಿದೆ.
800 ಅಡಿ ಆಳಕ್ಕೆ ಉರುಳಿದ ವಾಹನ: ಮಲಪ್ಪುರಂನ ಕುರುವಾದ ಪಾಂಗ್-ಪಲ್ಲಿಪರಂಬ ಸರ್ಕಾರಿ ಎಲ್‌ಪಿಎಸ್ ಮತ್ತು ಯುಪಿ ಶಾಲೆಯ ಸಿಬ್ಬಂದಿ ಹಾಗೂ ಅವರ ಸಂಬಂಧಿಕರು ಈ ಪ್ರವಾಸದಲ್ಲಿದ್ದರು. ವಾಲ್ಪಾರೈ ವೀಕ್ಷಣೆ ಮುಗಿಸಿ ಪೊಳ್ಳಾಚಿ ಮೂಲಕ ಕೇರಳಕ್ಕೆ ಮರಳುತ್ತಿದ್ದಾಗ, 13ನೇ ಹೇರ್‌ಪಿನ್ ಬೆಂಡ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಬರೋಬ್ಬರಿ 800 ಅಡಿ ಆಳದ ಕಂದಕಕ್ಕೆ ಉರುಳಿದೆ. ವಾಹನವು ಬೆಟ್ಟದ ಇಳಿಜಾರಿನಲ್ಲಿ ಗು ಉರುಳುತ್ತಾ ಬಂದು ಕೊನೆಗೆ 9ನೇ ಹೇರ್‌ಪಿನ್ ಬೆಂಡ್ ಬಳಿ ನಿಂತಿದೆ.
ಮೃತರ ವಿವರ: ಈ ಭೀಕರ ಅಪಘಾತದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಅಜಿತಾ (54), ಶಿಕ್ಷಕರಾದ ರಮ್ಲಾ (52), ಸುಹರಾ (43), ಮಜೀದ್ (43), ಆಶಾ (41), ಯುಪಿ ಶಾಲೆಯ ಶಿಕ್ಷಕಿ ಶಕೀಲಾ (37), ಶಾಲಾ ಅಡುಗೆ ಸಿಬ್ಬಂದಿ ಸಜಿತಾ (45), ಮಜೀದ್ ಅವರ ಪತ್ನಿ ರುಕಿಯಾ (39) ಮತ್ತು ಹದಿನಾಲ್ಕು ವರ್ಷದ ಬಾಲಕ ಹಶೀಮ್ (12) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ಮೊಹಮ್ಮದ್ ಫಾಸಿತ್ ಸೇರಿದಂತೆ ನಾಲ್ವರನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಷಣಾರ್ಧದಲ್ಲಿ ನುಚ್ಚುನೂರಾದ ಸಂಭ್ರಮ: ಶುಕ್ರವಾರ ಬೆಳಗ್ಗೆಯಷ್ಟೇ ಮಲಪ್ಪುರಂನಿಂದ ಹೊರಟಿದ್ದ ಈ 13 ಸದಸ್ಯರ ತಂಡ, ತೃಶೂರ್‌ನ ಅತಿರಪ್ಪಿಳ್ಳಿ ಜಲಪಾತ ವೀಕ್ಷಿಸಿ ನಂತರ ವಾಲ್ಪಾರೈಗೆ ತಲುಪಿತ್ತು. ಸಂಜೆ 5:15 ರಿಂದ 5:30 ರ ಸುಮಾರಿಗೆ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಕಡಿದಾದ ಘಾಟ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮಲಪ್ಪುರಂನ ಶಾಲೆಯ ಶಿಕ್ಷಕರು ಒಂದೇ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದು ಇಡೀ ಕೇರಳ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

