ಮಹಾರಾಷ್ಟ್ರ / ನಾಗ್ಪುರ : ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಟಿಸಿಎಸ್ ಲಿಂಕ್ಡ್ ಬಿಪಿಒ ಮತಾಂತರ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದ ಬೆನ್ನಲ್ಲೇ, ಈಗ ನಾಗ್ಪುರದಲ್ಲಿ ಅಂತಹದ್ದೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎನ್‌ಜಿಒ ಹೆಸರಿನಲ್ಲಿ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಬಲವಂತವಾಗಿ ಧಾರ್ಮಿಕ ಮತಾಂತರ ಮಾಡುತ್ತಿದ್ದ ಆರೋಪದಡಿ ಮಂಕಾಪುರ ಪೊಲೀಸರು ರಿಯಾಜ್ ಕಾಜಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಗಾಂಭೀರ್ಯತೆಯನ್ನು ಗಮನಿಸಿದ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ (ATS) ಕೂಡ ಈಗ ತನಿಖೆಯಲ್ಲಿ ಕೈಜೋಡಿಸಿದೆ.
ಆರೋಪಿ ರಿಯಾಜ್ ಕಾಜಿ ‘ಫಿಕರ್ ಫೌಂಡೇಶನ್’ ಮತ್ತು ‘ಪಢೇ ಹಮ್, ಪಢಾಯೇ ಹಮ್’ ಎಂಬ ಎರಡು ಎನ್‌ಜಿಒಗಳನ್ನು ನಡೆಸುತ್ತಿದ್ದನು. ಶಿಕ್ಷಣ ಮತ್ತು ಸಮಾಜ ಸೇವೆಯ ಹೆಸರಿನಲ್ಲಿ ನಡೆಯುತ್ತಿದ್ದ ಈ ಸಂಸ್ಥೆಗಳನ್ನು ಮತಾಂತರದ ದಂಧೆಗೆ ಮುಖವಾಡವಾಗಿ ಬಳಸಲಾಗುತ್ತಿತ್ತು ಎಂಬ ಗಂಭೀರ ದೂರುಗಳು ಕೇಳಿಬಂದಿವೆ. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ರಿಯಾಜ್ ಒತ್ತಡ ಹೇರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಎನ್‌ಜಿಒ ಒಳಗೆ ಮಹಿಳಾ ಸಿಬ್ಬಂದಿಗಳು ಕಡ್ಡಾಯವಾಗಿ ಇಸ್ಲಾಮಿಕ್ ಉಡುಪುಗಳನ್ನು ಧರಿಸಬೇಕು ಮತ್ತು ನಿರ್ದಿಷ್ಟ ಧಾರ್ಮಿಕ ಪದ್ಧತಿಗಳನ್ನು ಪಾಲಿಸಬೇಕು ಎಂದು ರಿಯಾಜ್ ಒತ್ತಾಯಿಸುತ್ತಿದ್ದನು. ಮತಾಂತರಕ್ಕೆ ಒಪ್ಪದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಾಗೂ ಅವರ ಮೇಲೆ ಮಾನಸಿಕವಾಗಿ ದೌರ್ಜನ್ಯ ಎಸಗುತ್ತಿದ್ದ ಆರೋಪವೂ ಕೇಳಿಬಂದಿದೆ. ಹಿಂದೂ ದೇವತೆಗಳನ್ನು ಅವಮಾನಿಸುವುದು ಮತ್ತು ಬಲವಂತವಾಗಿ ಮಾಂಸಾಹಾರ ಸೇವಿಸುವಂತೆ ಒತ್ತಡ ಹೇರುತ್ತಿದ್ದ ಬಗ್ಗೆ ಕೆಲಸಕ್ಕಿದ್ದ ಮಹಿಳೆಯರೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮಂಕಾಪುರ ಪೊಲೀಸ್ ನಿಲ್ದಾಣದ ಇನ್ಸ್‌ಪೆಕ್ಟರ್ ಹರೀಶ್ ಕಲ್ಸೇಕರ್ ಅವರು ರಿಯಾಜ್ ಕಾಜಿಯನ್ನು ಬಂಧಿಸಿರುವುದನ್ನು ಖಚಿತಪಡಿಸಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ ಎಂದಿದ್ದಾರೆ. ಈ ಎನ್‌ಜಿಒಗಳಿಗೆ ವಿದೇಶದಿಂದ ಹಣ ಬರುತ್ತಿದೆಯೇ? ಎಷ್ಟು ಮಹಿಳೆಯರನ್ನು ಈವರೆಗೆ ಮತಾಂತರ ಮಾಡಲು ಪ್ರಯತ್ನಿಸಲಾಗಿದೆ? ಎಂಬ ಬಗ್ಗೆ ಎಟಿಎಸ್ ಅಧಿಕಾರಿಗಳು ಈಗ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಕೃತ್ಯವೇ ಅಥವಾ ಇದರ ಹಿಂದೆ ದೊಡ್ಡ ಮತಾಂತರದ ಜಾಲವೇ ಅಡಗಿದೆಯೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.

