ಬೈಂದೂರು, ಏಪ್ರಿಲ್ 25 : ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಹಾಗೂ ಕುಖ್ಯಾತ “ಗರುಡ ಗ್ಯಾಂಗ್”ನ ಸಕ್ರಿಯ ಸದಸ್ಯ ಮಹಮ್ಮದ್ ಅಲ್ಫಾಜ್ (25)ನನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿದ ವರದಿಯ ಆಧಾರದ ಮೇಲೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಏಪ್ರಿಲ್ 24ರಂದು ಈ ಕಠಿಣ ಆದೇಶ ಹೊರಡಿಸಿದ್ದಾರೆ. ಮೂಲತಃ ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿಯವನಾದ ಈತ, ಪ್ರಸ್ತುತ ಕುಂದಾಪುರದ ಸಿದ್ದನಾಯ್ಕನ ರಸ್ತೆಯಲ್ಲಿ ವಾಸವಾಗಿದ್ದನು.
ಆರೋಪಿ ಮಹಮ್ಮದ್ ಅಲ್ಫಾಜ್ ತಂದೆ ಮೊಹಮ್ಮದ್ ಅಶ್ರಫ್, ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿ ನಿವಾಸಿಯಾದ ಅಲ್ಫಾಜ್ ವಿರುದ್ಧ ಜಿಲ್ಲೆಯ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ ಹಾಗೂ ಕುಂದಾಪುರ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಈತನ ವಿರುದ್ಧ ದಾಖಲಾಗಿರುವ ಒಟ್ಟು 10 ಪ್ರಕರಣಗಳಲ್ಲಿ ಕೊಲೆಯತ್ನ (2), ದರೋಡೆ (1), ದರೋಡೆ ಯತ್ನ (1), ಹಲ್ಲೆ (1), ಅಕ್ರಮ ಕೂಟ (2), ಅಪಹರಣ (1), ಮಾದಕ ವಸ್ತು ಮಾರಾಟ (1) ಹಾಗೂ ಇತರ (1) ಪ್ರಕರಣಗಳು ಸೇರಿವೆ.
ಸದ್ಯ ಆರೋಪಿಯ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದ್ದು, ಈತನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಅಧಿಕಾರಿಗಳು ಆದೇಶಿಸಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಪುಂಡಾಟಿಕೆ ನಡೆಸುವ ರೌಡಿ ಗುಂಪುಗಳಿಗೆ ಪೊಲೀಸರು ಪ್ರಬಲ ಎಚ್ಚರಿಕೆ ನೀಡಿದ್ದಾರೆ.

