ಮಂಗಳೂರು, ಏಪ್ರಿಲ್ 25 : ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ವಿಚ್ಛೇದಿತ ಪತ್ನಿಯ ವಿಚಾರವಾಗಿ ವ್ಯಕ್ತಿಯೊಬ್ಬ ತಲ್ವಾರ್ ಹಿಡಿದು ಮಾರಣಾಂತಿಕ ದಾಳಿಗೆ ಯತ್ನಿಸಿದ ಘಟನೆ ಮಂಗಳೂರಿನ ಕಳವಾರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಮಂಜೂರು ನಿವಾಸಿ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನವೀನ್ ಅವರ ಪತ್ನಿ ಕೆಲವು ತಿಂಗಳ ಹಿಂದೆ ವಿಚ್ಛೇದನ ಪಡೆದು ಜೋಕಟ್ಟೆಯಲ್ಲಿ ವಾಸವಾಗಿದ್ದರು. ಇದೇ ವಿಷಯವಾಗಿ ನವೀನ್ ಮತ್ತು ಕಳವಾರದ ದೇವಿ ಪ್ರಸಾದ್ ಎಂಬುವರ ನಡುವೆ ವೈಮನಸ್ಸು ಇತ್ತು ಎನ್ನಲಾಗಿದೆ. ಶುಕ್ರವಾರ ರಾತ್ರಿ ನವೀನ್ ಶಸ್ತ್ರಸಜ್ಜಿತನಾಗಿ ದೇವಿ ಪ್ರಸಾದ್ ಅವರ ಮನೆಗೆ ತೆರಳಿ, ದೇವಿ ಪ್ರಸಾದ್ ಮತ್ತು ಅವರ ಪೋಷಕರ ಮೇಲೆ ತಲ್ವಾರ್ನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ಆಪತ್ತನ್ನು ಅರಿತ ದೇವಿ ಪ್ರಸಾದ್ ತಕ್ಷಣ 112 ತುರ್ತು ಸೇವೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನವೀನ್ ತನ್ನ ಬೈಕ್ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ದೇವಿ ಪ್ರಸಾದ್ ನೀಡಿದ ದೂರಿನ ಮೇರೆಗೆ ಕೊಲೆಯತ್ನ (ಸೆಕ್ಷನ್ 307) ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

