ಇಸ್ಲಾಮಾಬಾದ್, ಏಪ್ರಿಲ್ 25 : ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮಹತ್ವದ ರಾಜತಾಂತ್ರಿಕ ಮಾತುಕತೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಇಡೀ ಇಸ್ಲಾಮಾಬಾದ್ ನಗರವನ್ನು ಬಿಗಿ ಭದ್ರತೆಯೊಂದಿಗೆ ಲಾಕ್‌ಡೌನ್ ಮಾಡಲಾಗಿದೆ.
ನಗರದ ಪ್ರಮುಖ ರಸ್ತೆಗಳನ್ನು ಸೀಲ್ ಮಾಡಲಾಗಿದ್ದು, ‘ರೆಡ್ ಝೋನ್’ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಶುಕ್ರವಾರ ತಡರಾತ್ರಿ ಇಸ್ಲಾಮಾಬಾದ್ ತಲುಪಿದ್ದು, ಪಾಕಿಸ್ತಾನದ ಉನ್ನತ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅತ್ತ ಅಮೆರಿಕದ ಪರವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಜ್ಯಾರೆಡ್ ಕುಶ್ನರ್ ಮತ್ತು ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಅವರು ಶನಿವಾರ ಮಾತುಕತೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ನಿರೀಕ್ಷೆಯಿದೆ.
ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೊಂದಿಗೆ ಆರಂಭವಾದ ಈ ಸಂಘರ್ಷವನ್ನು ತಣ್ಣಗಾಗಿಸಲು ಪಾಕಿಸ್ತಾನ ಸಂಧಾನಕಾರನ ಪಾತ್ರ ವಹಿಸುತ್ತಿದೆ. ಏಪ್ರಿಲ್ 11 ರಂದು ನಡೆದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿದ್ದರೂ, ಇದೀಗ ಟ್ರಂಪ್ ಅವರು ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿರುವುದು ಆಶಾವಾದ ಮೂಡಿಸಿದೆ. ಒಂದು ವೇಳೆ ಈ ಮಾತುಕತೆ ಯಶಸ್ವಿಯಾದರೆ ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಗಳಾಗಲಿವೆ.

