ಮಂಗಳೂರು : ಯುವ ಪಂಡಿತರು ಹಾಗೂ ಅಧ್ಯಾಪಕರಾದ ಅಮೀರ್ ಅರ್ಶದಿ ಅವರು ಇಹಲೋಕ ತ್ಯಜಿಸಿದ ಸುದ್ದಿ ಇಂದು ಮುಂಜಾನೆ ಎಲ್ಲರಿಗೂ ಆಘಾತ ತಂದಿದೆ. ಇಂದು ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭ ನಿಗದಿಯಾಗಿತ್ತು. ಈ ಸಂಭ್ರಮಕ್ಕೆ ಬಂಧು-ಮಿತ್ರರು, ಶಿಷ್ಯರು ಹಾಗೂ ಗಣ್ಯರನ್ನು ಪ್ರೀತಿಯಿಂದ ಆಹ್ವಾನಿಸಿದ್ದ ಅವರು, ಮನೆಯೊಳಗೆ ಹೆಜ್ಜೆ ಇಡುವ ಕೆಲವೇ ಗಂಟೆಗಳ ಮೊದಲು ಶಾಶ್ವತ ನಿವಾಸದತ್ತ ಪಯಣ ಬೆಳೆಸಿದರು.
ಕುಟುಂಬದ ಕನಸಿನ ಮನೆಯಲ್ಲಿ ಸಂತಸದ ಕ್ಷಣಗಳನ್ನು ಕಳೆಯಬೇಕೆಂಬ ಆಶಯ ಅವರಿಗಿತ್ತು. ಆದರೆ ತಾತ್ಕಾಲಿಕ ಮನೆಯ ಬಾಗಿಲು ತೆರೆಯುವ ಮುನ್ನವೇ ಜೀವನದ ಬಾಗಿಲು ಮುಚ್ಚಿಕೊಂಡಿರುವುದು ವಿಧಿಯ ವಿಚಿತ್ರ ನಿರ್ಣಯವಾಗಿದೆ. ನಿನ್ನೆವರೆಗೆ ನಮ್ಮೊಂದಿಗಿದ್ದ ವ್ಯಕ್ತಿ ಇಂದು ನೆನಪಾಗಿ ಉಳಿದಿರುವುದು ಜೀವನದ ನಶ್ವರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಅಮೀರ್ ಅರ್ಶದಿ ಅವರು ಕೇವಲ ಅಧ್ಯಾಪಕರಾಗಿರದೆ, ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅವರು ಕಲಿಸಿದ ದೀನ್‌ನ ಜ್ಞಾನ ಮತ್ತು ನೈತಿಕ ಮೌಲ್ಯಗಳು ಅವರ ಶಿಷ್ಯರ ಬದುಕಿನಲ್ಲಿ ಸದಾ ಬೆಳಕಾಗಿ ಉಳಿಯಲಿವೆ. ಅವರು ಬಿತ್ತಿದ ಜ್ಞಾನದ ಬೀಜಗಳು ಅವರಿಗೆ ‘ಸದಕತುಲ್ ಜಾರಿಯ’ವಾಗಿ (ಶಾಶ್ವತ ಪುಣ್ಯ) ಲಭಿಸಲಿ ಎಂದು ಪ್ರಾರ್ಥಿಸಲಾಗಿದೆ.
ಅವರ ಅಗಲಿಕೆಯು ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಶಿಷ್ಯ ಸಮುದಾಯ ಮತ್ತು ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹು ತಆಲಾ ಅವರ ಸತ್ಕಾರ್ಯಗಳನ್ನು ಸ್ವೀಕರಿಸಿ, ಅವರಿಗೆ ಜನ್ನತುಲ್ ಫಿರ್ದೌಸ್‌ನಲ್ಲಿ ಉನ್ನತ ಸ್ಥಾನವನ್ನು ಕರುಣಿಸಲಿ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಆಶಿಸಲಾಗಿದೆ.

