ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಏಪ್ರಿಲ್ 24ರಂದು ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಪ್ರೇರಣಾ ಮೂಲ್ಯ ಅವರು ಏಪ್ರಿಲ್ 27ರ ಸೋಮವಾರದಂದು ನಿಧನರಾಗಿದ್ದಾರೆ. ಸಿಇಟಿ ಪರೀಕ್ಷೆ ಬರೆದು ತಂದೆಯೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು
ಕಾರ್ಕಳದಿಂದ ನಿಟ್ಟೆಯತ್ತ ಅತಿವೇಗವಾಗಿ ಸಾಗುತ್ತಿದ್ದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬರ ಕಾರು, ಪ್ರೇರಣಾ ಮತ್ತು ಅವರ ತಂದೆ ನವೀನ್‌ಚಂದ್ರ ಅವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆಗೆ ಎಸೆಯಲ್ಪಟ್ಟಿದ್ದು, ತಂದೆ-ಮಗಳಿಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ಗಾಯಗೊಂಡಿದ್ದ ನವೀನ್‌ಚಂದ್ರ ಅವರು ಚಿಕಿತ್ಸೆಗೆ ಸ್ಪಂದಿಸದೆ ಅಪಘಾತ ನಡೆದ ದಿನವೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅಂದಿನಿಂದ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪ್ರೇರಣಾ ಅವರು ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವಿದ್ಯಾರ್ಥಿಗಳ ಅಜಾಗರೂಕತೆ ಮತ್ತು ಬೇಜವಾಬ್ದಾರಿತನದ ಚಾಲನೆಗೆ ಒಂದೇ ಮನೆಯ ಇಬ್ಬರು ಬಲಿಯಾಗಿರುವುದು ಸ್ಥಳೀಯರ ಮತ್ತು ಸಂಬಂಧಿಕರ ಆಕ್ರಂದನಕ್ಕೆ ಕಾರಣವಾಗಿದೆ.
ತಂದೆ ಮತ್ತು ಏಕೈಕ ಮಗಳ ಸಾವು ಆ ಕುಟುಂಬವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ. ಭವಿಷ್ಯದ ಬಗ್ಗೆ ಸಾವಿರಾರು ಕನಸು ಕಂಡಿದ್ದ ವಿದ್ಯಾರ್ಥಿನಿಯ ಬದುಕು ಅಕಾಲಿಕವಾಗಿ ಅಂತ್ಯಗೊಂಡಿರುವುದು ಇಡೀ ಕಾರ್ಕಳವನ್ನು ಕಂಬನಿ ಮಿಡಿಯುವಂತೆ ಮಾಡಿದೆ.

