Monday, May 11, 2026
HomeLOCALPuttur : ನಿರ್ಗತಿಕ ವೃದ್ಧೆಗೆ ಪುನರ್ಜೀವ ನೀಡಿದ ಸರ್ಕಾರಿ ಆಸ್ಪತ್ರೆ ; ವೈದ್ಯರು ಮತ್ತು ಪೊಲೀಸರ...

Puttur : ನಿರ್ಗತಿಕ ವೃದ್ಧೆಗೆ ಪುನರ್ಜೀವ ನೀಡಿದ ಸರ್ಕಾರಿ ಆಸ್ಪತ್ರೆ ; ವೈದ್ಯರು ಮತ್ತು ಪೊಲೀಸರ ಮಾನವೀಯತೆಗೆ ಶ್ಲಾಘನೆ!

ಪುತ್ತೂರು : ಪುತ್ತೂರಿನ ಕೋಡಿಂಬಾಡಿ ಗ್ರಾಮದ ದಾರಂದ ಕುಕ್ಕುಮನೆ ನಿವಾಸಿಯಾದ ಲಕ್ಷ್ಮೀ (80) ಅವರು ಕಳೆದ ಮಾರ್ಚ್ ತಿಂಗಳಲ್ಲಿ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ. ಅವರ ನೇತೃತ್ವದ ವೈದ್ಯಕೀಯ ತಂಡವು ಅಜ್ಜಿಗೆ ಅತ್ಯುತ್ತಮ ಚಿಕಿತ್ಸೆ ಮತ್ತು ಪ್ರೀತಿಯ ಆರೈಕೆ ನೀಡಿತು. ಪರಿಣಾಮವಾಗಿ, ಸಾವಿನ ದವಡೆಯಲ್ಲಿದ್ದ ವೃದ್ಧೆ ಇಂದು ಸಂಪೂರ್ಣ ಚೇತರಿಸಿಕೊಂಡು ಮತ್ತೆ ನಡೆಯುವ ಮಟ್ಟಕ್ಕೆ ತಲುಪಿದ್ದಾರೆ. ಇದು ಸರ್ಕಾರಿ ಆಸ್ಪತ್ರೆಗಳ ಸೇವಾ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ವೃದ್ಧೆ ಸಂಪೂರ್ಣ ಗುಣಮುಖರಾದ ಬಳಿಕ ಅವರಿಗೆ ಸುರಕ್ಷಿತ ನೆಲೆ ಕಲ್ಪಿಸಲು ವೈದ್ಯಾಧಿಕಾರಿಗಳು ಮುಂದಾದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಹರೀಶ್ ಕೆ. ಮತ್ತು ಮಂಗಳ ಕಾಳೆ ಅವರ ಮಾರ್ಗದರ್ಶನ ಹಾಗೂ ಸಮಾಜ ಸೇವಕ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ವೃದ್ಧೆಯನ್ನು ಕಸಬಾ ಗ್ರಾಮದ ಕರೆಮೊಲೆಯ ‘ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರ’ಕ್ಕೆ ದಾಖಲಿಸಲು ನಿರ್ಧರಿಸಲಾಯಿತು. ಈ ಕಾರ್ಯದಲ್ಲಿ ವಿವಿಧ ಇಲಾಖೆಗಳು ಒಂದಾಗಿ ಕೆಲಸ ಮಾಡಿರುವುದು ಶ್ಲಾಘನೀಯ.

ಲಕ್ಷ್ಮಮ್ಮನವರನ್ನು ಆಶ್ರಮಕ್ಕೆ ಕರೆದೊಯ್ಯುವ ವೇಳೆ ಪುತ್ತೂರು ಪೊಲೀಸ್ ಇಲಾಖೆಯ ಅಕ್ಕಪಡೆಯ ಸಿಬ್ಬಂದಿಗಳಾದ ಸಂಧ್ಯಾ, ನವ್ಯ ಮತ್ತು ರೇವತಿ ಅವರು ವೃದ್ಧೆಯನ್ನು ತಮ್ಮ ಮಗುವಿನಂತೆ ಕೈಹಿಡಿದು ಆಶ್ರಮಕ್ಕೆ ಕರೆದೊಯ್ದು ಮಾನವೀಯತೆ ಮೆರೆದರು. ಇನ್ನು ವಾಹನ ಚಾಲಕ ನವಾಜ್ ಬಡ್ಕಿ ಅವರು ವೃದ್ಧೆಯನ್ನು ತಲುಪಿಸುವುದರ ಜೊತೆಗೆ, ತಮ್ಮ ದುಡಿಮೆಯ ಒಂದು ಭಾಗವನ್ನು ಅಜ್ಜಿಯ ಖರ್ಚಿಗಾಗಿ ನೀಡಿ ಔದಾರ್ಯ ಮೆರೆದರು. ಪ್ರತಿಯೊಬ್ಬರ ಈ ಪುಟ್ಟ ಸಹಕಾರವು ವೃದ್ಧೆಯ ಬಾಳಿಗೆ ದೊಡ್ಡ ಆಸರೆಯಾಯಿತು.

ಆಸ್ಪತ್ರೆಯಿಂದ ಆಶ್ರಮಕ್ಕೆ ತೆರಳುವ ಸಂದರ್ಭದಲ್ಲಿ ಲಕ್ಷ್ಮಮ್ಮ ಅವರು ಡಾ. ಯದುರಾಜ್ ಅವರನ್ನು ಕಂಡು ಎರಡು ಕೈಗಳನ್ನು ಜೋಡಿಸಿ ಧನ್ಯವಾದ ಅರ್ಪಿಸಿದರು. “ನೀವೆಲ್ಲಾ ದೇವರ ರೂಪದಲ್ಲಿ ಬಂದು ನನ್ನ ರಕ್ಷಣೆ ಮಾಡಿದ್ದೀರಿ” ಎಂದು ಅವರು ಕಣ್ಣೀರಿಟ್ಟ ಕ್ಷಣ ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ಇನ್ನು ಬೆಂಗಳೂರಿನ ದೀಪಶ್ರೀ ಆಸ್ಪತ್ರೆಯ ಡಾ. ಶ್ರೀಧರ್ ಅವರು ಯಾವುದೇ ಶುಲ್ಕವಿಲ್ಲದೆ ವೃದ್ಧೆಯನ್ನು ತಮ್ಮ ಆಶ್ರಮದಲ್ಲಿ ಸೇರಿಸಿಕೊಳ್ಳಲು ಮುಂದೆ ಬಂದಿದ್ದು, ಅವರ ವಿಶಾಲ ಹೃದಯವಂತಿಕೆಯನ್ನು ತೋರಿಸುತ್ತದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!