ವಯನಾಡ್ : 2024ರ ಭೀಕರ ವಯನಾಡ್ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ 51 ಕುಟುಂಬಗಳು ಸೋಮವಾರ ತಮ್ಮ ಹೊಸ ಮನೆಗಳಿಗೆ ಸ್ಥಳಾಂತರಗೊಂಡಿವೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕೈಗೊಂಡ ಪುನರ್ವಸತಿ ಯೋಜನೆಯಡಿ ನಿರ್ಮಿಸಲಾದ ಈ ಮನೆಗಳನ್ನು ಸಂತ್ರಸ್ತರಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಗಿದೆ. ರಾಜ್ಯ ಸರ್ಕಾರದ ಯೋಜನೆಗಳು ಇನ್ನೂ ಕುಂಟುತ್ತಾ ಸಾಗುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ಭಾರೀ ಗಮನ ಸೆಳೆದಿದೆ.
ಜಿಲ್ಲೆಯ ಮುಟ್ಟಿಲ್ ಪ್ರದೇಶದ 11.5 ಎಕರೆ ಭೂಮಿಯಲ್ಲಿ ಮೊದಲ ಹಂತದ ಮನೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಮನೆಗೆ ಎಂಟು ಸೆಂಟ್ಸ್ ಜಾಗ ನೀಡಲಾಗಿದ್ದು, 1,060 ಚದರ ಅಡಿ ವಿಸ್ತೀರ್ಣದಲ್ಲಿ ಮೂರು ಮಲಗುವ ಕೋಣೆಗಳು ಸೇರಿದಂತೆ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮನೆಗಳ ಜೊತೆಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಕೂಡ ಒದಗಿಸಿ ಸಂತ್ರಸ್ತರಿಗೆ ಆಸರೆಯಾಗಿದ್ದಾರೆ.
ಗೃಹಪ್ರವೇಶದ ವೇಳೆ ವಿವಿಧ ಧರ್ಮಗಳ ಕುಟುಂಬಗಳು ತಮ್ಮ ತಮ್ಮ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಪೂರೈಸಿದ್ದು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಹಸ್ತಾಂತರಗೊಂಡ 51 ಮನೆಗಳಲ್ಲಿ 14 ಕುಟುಂಬಗಳು ಹಿಂದೂ ಸಮುದಾಯಕ್ಕೆ ಸೇರಿದ್ದು, ಅವರು ತಮ್ಮ ಹೊಸ ಮನೆಯಲ್ಲಿ ದೀಪ ಬೆಳಗಿಸಿ, ಪೂಜೆ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಭಾರತದ ಅಪ್ಪಟ ಕೋಮು ಸಾಮರಸ್ಯಕ್ಕೆ ಸಾಕ್ಷಿ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

