ನವದೆಹಲಿ : ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ಸರಾಸರಿ ₹993 ರಷ್ಟು ಏರಿಕೆ ಮಾಡಲಾಗಿದೆ. ದೆಹಲಿಯಲ್ಲಿ ಈ ಹಿಂದೆ ₹2,078.50 ಇದ್ದ ದರ ಈಗ ₹3,071.50 ಕ್ಕೆ ತಲುಪಿದ್ದರೆ, ಮುಂಬೈನಲ್ಲಿ ದರ ₹2,031 ರಿಂದ ₹3,024 ಕ್ಕೆ ಜಿಗಿದಿದೆ. ಫೆಬ್ರವರಿ 28 ರಿಂದೀಚೆಗೆ ಅಂತರರಾಷ್ಟ್ರೀಯ ಸಂಘರ್ಷಗಳ ಕಾರಣದಿಂದ ಇದು ಮೂರನೇ ಭಾರಿ ಏರಿಕೆಯಾಗಿದೆ. ಈ ಅನಿರೀಕ್ಷಿತ ಏರಿಕೆಯಿಂದಾಗಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಸಣ್ಣ ತಿಂಡಿ ತಿನಿಸುಗಳ ಅಂಗಡಿಗಳ ಮೇಲೆ ಭಾರಿ ಆರ್ಥಿಕ ಹೊರೆ ಬಿದ್ದಿದ್ದು, ಗ್ರಾಹಕರಿಗೆ ಊಟ, ತಿಂಡಿ ದುಬಾರಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಒಂದೆಡೆ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದರೆ, ಇನ್ನೊಂದೆಡೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜೊತೆಗೆ ಪೆಟ್ರೋಲ್, ಡೀಸೆಲ್ ದರಗಳು ಮತ್ತು ವಿಮಾನಯಾನ ಸಂಸ್ಥೆಗಳಿಗಾಗಿ ಬಳಸುವ ಏವಿಯೇಷನ್ ಟರ್ಬೈನ್ ಫ್ಯೂಯಲ್ (ATF) ದರಗಳನ್ನು ಕೂಡಾ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಆದಾಗ್ಯೂ, ತೈಲ ಮಾರುಕಟ್ಟೆ ಕಂಪನಿಗಳು (OMCs) ಕಚ್ಚಾ ತೈಲ ದರ ಬ್ಯಾರೆಲ್‌ಗೆ $120 ಕ್ಕಿಂತ ಹೆಚ್ಚಿರುವ ಕಾರಣದಿಂದಾಗಿ ದಿನಕ್ಕೆ ಸುಮಾರು ₹16,000 ಕೋಟಿ ನಷ್ಟ ಅನುಭವಿಸುತ್ತಿವೆ. ಸರ್ಕಾರವು ಹಣದುಬ್ಬರ ನಿಯಂತ್ರಿಸಲು ಒಂದು ಕಡೆ ಮತ್ತು ಕಂಪನಿಗಳ ನಷ್ಟ ಸರಿದೂಗಿಸಲು ಮತ್ತೊಂದು ಕಡೆ ಸೂಕ್ಷ್ಮವಾಗಿ ಸಮತೋಲನ ಕಾಯ್ದುಕೊಳ್ಳುತ್ತಿದೆ.
ಮೇ 1, 2026 ರಿಂದ ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಇನ್ನು ಮುಂದೆ ನಗರ ಪ್ರದೇಶಗಳಲ್ಲಿ ಸಿಲಿಂಡರ್ ಬುಕಿಂಗ್ ನಡುವಿನ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ, ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದೆ. ಈ ನಿರ್ದಿಷ್ಟ ಅವಧಿಗೆ ಮುನ್ನ ಬುಕಿಂಗ್ ಮಾಡಲು ಪ್ರಯತ್ನಿಸಿದರೆ ಸಿಸ್ಟಮ್ ಅದನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತದೆ. ಜೊತೆಗೆ, ಸಿಲಿಂಡರ್ ಡೆಲಿವರಿ ಪಡೆಯುವಾಗ ‘ಡೆಲಿವರಿ ಅಥೆಂಟಿಕೇಶನ್ ಕೋಡ್’ (DAC) ಕಡ್ಡಾಯಗೊಳಿಸಲಾಗಿದ್ದು, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನೀಡುವ ಮೂಲಕವೇ ಸಿಲಿಂಡರ್ ಪಡೆಯಬೇಕಿದೆ.