ತುಮಕೂರು ಮೇ.2 : ಕುಣಿಗಲ್ ತಾಲೂಕಿನ ಆಳೇರೆ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಾಲಯದ ಅರ್ಚಕ ಶಿವಣ್ಣ, ಅನಾಥನಾಗಿದ್ದ ಅಕ್ಕನ ಮಗ ಹೇಮಂತನನ್ನು ಮಗನಂತೆ ಸಾಕಿ ಸಲಹಿದ್ದರು. ಆದರೆ, ಉಂಡ ಮನೆಗೆ ಕನ್ನ ಹಾಕಿದ ಹೇಮಂತ್, ಮಾವನ ಪತ್ನಿ ಕಾವ್ಯಾಳೊಂದಿಗೆ ಅನೈತಿಕ ಸಂಬಂಧ ಬೆಳೆಸುವ ಮೂಲಕ ಸಂಸಾರದಲ್ಲಿ ಬೆಂಕಿ ಇಟ್ಟಿದ್ದ. ಈ ವಿಷಯ ತಿಳಿದು ಶಿವಣ್ಣನಿಗೆ ಮುಗಿಲು ಮುರಿದುಬಿದ್ದಂತಾಗಿತ್ತು. ಗ್ರಾಮಸ್ಥರು ಪಂಚಾಯಿತಿ ಮಾಡಿ ಇಬ್ಬರನ್ನೂ ಒಂದುಗೂಡಿಸಿ, “ಇನ್ನಾದರೂ ಅನ್ಯೋನ್ಯವಾಗಿರಿ” ಎಂದು ಬುದ್ಧಿ ಹೇಳಿ ಕಳುಹಿಸಿದ್ದರು.
ಆದರೆ ಕಾವ್ಯಾಳ ಅಸಲಿ ಮುಖವಾಡ ಕಳಚಲು ಹೆಚ್ಚು ಸಮಯ ಬೇಕಾಗಲಿಲ್ಲ. ಕಳೆದ ಒಂದು ವಾರದ ಹಿಂದೆ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರ ಹೇಮಂತನ ಜೊತೆ ಓಡಿಹೋಗಿದ್ದ ಕಾವ್ಯಾ, ಶಿವಣ್ಣ ದೂರು ನೀಡಿದ ಬಳಿಕ ಪೊಲೀಸ್ ಠಾಣೆಯ ಮುಂದೆ ನಾಟಕೀಯವಾಗಿ ಕ್ಷಮೆ ಕೇಳಿ ಮನೆಗೆ ಮರಳಿದ್ದಳು. ಆದರೆ ಆಕೆ ಮನೆಗೆ ಬಂದಿದ್ದು ಸಂಸಾರ ಮಾಡಲಿಕ್ಕಲ್ಲ, ದರೋಡೆ ಮಾಡಲಿಕ್ಕೆ! ಶಿವಣ್ಣ ಕೆಲಸಕ್ಕೆ ಹೋದ ಸಮಯ ನೋಡಿ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತನ ಜೊತೆ ಪರಾರಿಯಾಗಿದ್ದಳು.
ಪತ್ನಿಯ ಈ ದ್ರೋಹ, ಅಕ್ಕನ ಮಗನ ನಂಬಿಕೆ ದ್ರೋಹ ಮತ್ತು ಸಮಾಜದಲ್ಲಿ ಆದ ಅವಮಾನದಿಂದ ಶಿವಣ್ಣ ಸಂಪೂರ್ಣವಾಗಿ ಕುಸಿದುಹೋದರು. ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಎಂದು ನಿರ್ಧರಿಸಿದ ಅವರು, ನಿನ್ನೆ ರಾತ್ರಿ ಕ್ರೂರ ನಿರ್ಧಾರ ತೆಗೆದುಕೊಂಡರು. ಮೊದಲು ತನ್ನ ಇಬ್ಬರು ಪುಟ್ಟ ಗಂಡು ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (6) ಅವರನ್ನು ಕೈಯಾರೆ ಉಸಿರುಗಟ್ಟಿಸಿ ಸಾಯಿಸಿ, ನಂತರ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಅಕ್ಕಪಕ್ಕದವರು ನೋಡಿದಾಗ ಈ ಘೋರ ದುರಂತ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ದೌಡಾಯಿಸಿದ ಕುಣಿಗಲ್ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಂಬಿದವರಿಂದಲೇ ವಂಚನೆಗೊಳಗಾದ ಶಿವಣ್ಣನ ಕಥೆ ಈಗ ದುರಂತ ಅಂತ್ಯ ಕಂಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಕಾವ್ಯಾ ಮತ್ತು ಹೇಮಂತ್ಗಾಗಿ ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ.

